ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ 
ರಾಜಕೀಯ

ಖರ್ಗೆ ತವರು ಕ್ಷೇತ್ರದಿಂದಲೇ ಪ್ರಧಾನಿ ಮೋದಿ ನಾಳೆಯಿಂದ ಲೋಕಸಭಾ ಚುನಾವಣಾ ಪ್ರಚಾರ ಆರಂಭ!

Ramyashree GN

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆಯಿಂದ (ಶನಿವಾರ) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾದ ಕಲಬುರಗಿಯಿಂದಲೇ ರಾಜ್ಯದಲ್ಲಿ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಔಪಚಾರಿಕವಾಗಿ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಕೇಂದ್ರ ಪಟ್ಟಣದ ಎನ್‌ವಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಹಿಂದೆ ಎರಡು ಬಾರಿ ಕಲಬುರಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಖರ್ಗೆ ಅವರು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ 95,452 ಮತಗಳ ಅಂತರದಿಂದ ಸೋತಿದ್ದರು. ಹಲವು ದಶಕಗಳ ರಾಜಕೀಯ ಜೀವನದಲ್ಲಿ ಖರ್ಗೆ ಅವರಿಗೆ ಇದು ಮೊದಲ ಚುನಾವಣಾ ಸೋಲಾಗಿತ್ತು.

ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಮತ್ತೊಮ್ಮೆ ಉಮೇಶ್ ಜಾಧವ್ ಅವರನ್ನೇ ಕಣಕ್ಕಿಳಿಸಿದೆ.

ದೇಶದಾದ್ಯಂತ ಪಕ್ಷ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬದಲಿಗೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಅವರ ಸೋದರಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಲಿದೆ ಎನ್ನುವ ಊಹಾಪೋಹಗಳು ದಟ್ಟವಾಗಿವೆ.

ಮಾರ್ಚ್ 18 ರಂದು ಶಿವಮೊಗ್ಗ ಜಿಲ್ಲೆಗೆ ಮೋದಿ ಭೇಟಿ ನೀಡಲಿದ್ದು, ಮಧ್ಯಾಹ್ನ 2 ಗಂಟೆಗೆ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರು ಶಿವಮೊಗ್ಗದಿಂದ ಹಾಲಿ ಸಂಸದರಾಗಿದ್ದು, ಪಕ್ಷದಿಂದ ಮತ್ತೆ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಯಡಿಯೂರಪ್ಪ ಅವರ ಮತ್ತೊಬ್ಬ ಪುತ್ರ ಬಿವೈ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ.

28 ಲೋಕಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಬಿಜೆಪಿ ಈಗಾಗಲೇ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 28 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಮಂಡ್ಯದಲ್ಲಿ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆಗ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಯು ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿತ್ತು.

ಕಳೆದ ಸೆಪ್ಟೆಂಬರ್‌ನಲ್ಲಿ ಎನ್‌ಡಿಎಗೆ ಸೇರ್ಪಡೆಗೊಂಡ ಜೆಡಿಎಸ್ ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.

ಮೋದಿ ಭೇಟಿಯ ವಿವರಗಳನ್ನು ಹಂಚಿಕೊಂಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ನಾಯಕರು ಮುಂದಿನ ದಿನಗಳಲ್ಲಿ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಪ್ರಚಾರಕ್ಕಾಗಿ ಭೇಟಿ ನೀಡಲಿದ್ದಾರೆ ಎಂದರು.

ಪಕ್ಷದ ಚುನಾವಣಾ ಸಿದ್ಧತೆ ಕುರಿತು ಮಾತನಾಡಿದ ಅವರು, ಲೋಕಸಭೆ ಚುನಾವಣೆಗಾಗಿ 28 ಲೋಕಸಭಾ ಕ್ಷೇತ್ರಗಳನ್ನು ಎಂಟು ಕ್ಲಸ್ಟರ್‌ಗಳಾಗಿ ವಿಂಗಡಿಸಿದ್ದೇವೆ. ಸ್ಥಳೀಯ ರಾಜಕೀಯ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ಆ ಎಂಟು ಕ್ಲಸ್ಟರ್‌ಗಳಲ್ಲಿ ಕಾರ್ಯಕ್ರಮಗಳು ಮತ್ತು ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಶಾ ಮತ್ತು ನಡ್ಡಾ ಸೇರಿದಂತೆ ಹಲವಾರು ಹಿರಿಯ ನಾಯಕರು ಈಗಾಗಲೇ ಈ ಕ್ಲಸ್ಟರ್‌ಗಳಲ್ಲಿ ಒಂದಕ್ಕೆ ಭೇಟಿ ನೀಡಿದ್ದಾರೆ. ಕಾರ್ಯಕರ್ತರ ಸಮಾವೇಶ, ಹಿತೈಷಿಗಳನ್ನು ಸಂಪರ್ಕಿಸಲಾಗಿದೆ ಮತ್ತು ಈ ಎಂಟು ಕ್ಲಸ್ಟರ್‌ಗಳಲ್ಲಿ ಚುನಾವಣಾ ತಯಾರಿ ನಡೆಯುತ್ತಿದೆ. ಎರಡನೇ ಹಂತದಲ್ಲಿ ಬೃಹತ್ ಸಾರ್ವಜನಿಕ ಸಭೆಗಳು ನಡೆಯಲಿವೆ.

SCROLL FOR NEXT