ಯಡಿಯೂರಪ್ಪ ಭೇಟಿಯಾದ ಯದುವೀರ್ ಒಡೆಯರ್
ಯಡಿಯೂರಪ್ಪ ಭೇಟಿಯಾದ ಯದುವೀರ್ ಒಡೆಯರ್ 
ರಾಜಕೀಯ

ಯದುವೀರ್ ಒಡೆಯರ್ ಉಪಸ್ಥಿತಿ ಮೈಸೂರಿನಲ್ಲಿ ಬಿಜೆಪಿ ಗೆಲುವಿಗೆ ಸಹಾಯಕವಾಗಲಿದೆ: ಬಿಎಸ್ ಯಡಿಯೂರಪ್ಪ

Manjula VN

ಬೆಂಗಳೂರು: ಯದುವೀರ್ ಅವರ ಉಪಸ್ಥಿತಿಯು ಮೈಸೂರು ಮತ್ತು ನೆರೆಯ ಕ್ಷೇತ್ರಗಳಲ್ಲಿ ಬಿಜೆಪಿಗೆ ಜನಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಹೇಳಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೆಸರು ಘೋಷಣೆಯಾದ ಮರುದಿನವೇ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರು ನಿನ್ನೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಯದುವೀರ್ ಅವರ ಉಪಸ್ಥಿತಿಯು ಮೈಸೂರು ಮತ್ತು ನೆರೆಯ ಕ್ಷೇತ್ರಗಳಲ್ಲಿ ಬಿಜೆಪಿಗೆ ಜನಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ. ಮೈಸೂರು-ಕೊಡಗಿನ ಪಕ್ಷದ ಅಭ್ಯರ್ಥಿಯಾಗಿ, ಯದುವೀರ್ ಅವರು ನೆರೆಯ ಆರು ಅಥವಾ ಏಳು ಕ್ಷೇತ್ರಗಳಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿವೆ. ಮೈಸೂರು ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಕೂಡ ಒಪ್ಪಿಗೆ ನೀಡಿದ್ದಾರೆ. ಒಟ್ಟು 26 ಕ್ಷೇತ್ರಗಳು ನಮ್ಮ ಗುರಿಯಾಗಿದ್ದು, ಯದುವೀರ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ ಎಂದು ಹೇಳಿದರು.

ಪ್ರತಾಪ್ ಸಿಂಹ ಅವರ ಅಸಮಾಧಾನದ ಕುರಿತ ಪ್ರಶ್ನೆಗೆ ಉತ್ತರಿಸಿ, ಎಲ್ಲಾ ನಾಯಕರಿಗೂ ಮನವರಿಕೆ ಮಾಡಿಕೊಡಲಾಗಿದೆ. ಎಲ್ಲರೂ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆಂದು ತಿಳಿಸಿದರು.

ನಂತರ ಮಾತನಾಡಿದ ಯದುವೀರ್ ಅವರು, ನಂಬಿಕೆಗಳು ಪಕ್ಷದ ದೃಷ್ಟಿಗೆ ಹೊಂದಿಕೆಯಾಗಿರುವುದರಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದರು.

ನೀವು ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರಲಿ, ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಹೀಗಾಗಿಯೇ ನಾನು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡೆ. ನನ್ನ ನಗರ ಹಾಗೂ ಮೈಸೂರು-ಕೊಡಗು ಕ್ಷೇತ್ರದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನಗೆ ಗೌರವ ತಂದಿದೆ. ನೀತಿಯ ಮೇಲೆ ಪ್ರಭಾವ ಬೀರಲು, ಅಭಿವೃದ್ಧಿಯನ್ನು ತರಲು ರಾಜಕೀಯವು ಸರಿಯಾದ ಮಾರ್ಗವಾಗಿದೆಚ ಕೇಂದ್ರ ನಾಯಕತ್ವದ ದೃಷ್ಟಿಕೋನದಿಂದ ಇದನ್ನು ಸಾಧಿಸಬಹುದು ಎಂದು ನಾನು ನಂಬುತ್ತೇನೆಂದು ತಿಳಿಸಿದರು.

ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರಕೋಟೆಯಾಗಿದೆ. ಆದರೆ, ಇಲ್ಲಿ ಗೆಲ್ಲುವ ವಿಶ್ವಾಸವಿದೆ. ಮುಖ್ಯಮಂತ್ರಿಗಳು ತಮ್ಮ ನಗರದಲ್ಲಿ ತಮ್ಮ ಸ್ಥಾನ ಮತ್ತು ಪ್ರಭಾವದ ಮೇಲೆ ಹಿಡಿತ ಹೊಂದಿದ್ದಾರೆ. ನಾವು ನ್ಯಾಯಯುತ ಹೋರಾಟವನ್ನು ನಡೆಸುತ್ತೇವೆ. ನಮ್ಮ ಸಾಮರ್ಥ್ಯದ ಆಧಾರದ ಮೇಲೆ ನಾವು ಗೆಲ್ಲುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಚುನಾವಣೆ ಕಾದಾಟವನ್ನು ಕಾಮನ್ ಮ್ಯಾನ್ ವರ್ಸಸ್ ಕಿಂಗ್ ಎಂದು ಬಿಂಬಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರು, ಇದು ಕೇವಲ ನಿರೂಪಣೆಯಷ್ಟೇ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದರು.

ಪ್ರತಾಪ್ ಸಿಂಹ ಅವರು ಕಳೆದ 10 ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಲು ಬಯಸಿದ್ದೇನೆ. ಪ್ರತಾಪ್ ಸಿಂಹ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರೂ ಕೂಡ ಸಹಕಾರ ಹಾಗೂ ಬೆಂಬಲವನ್ನು ಕೊಡುತ್ತಿದ್ದಾರೆಂದು ಹೇಳಿದರು.

ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಕುರಿತು ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿದ್ದೆ. ಸಾರ್ವಜನಿಕ ಜೀವನದೊಂದಿಗು ಸಂಬಂಧ ಹೊಂದಿದ್ದೆ. ಒಬ್ಬ ವ್ಯಕ್ತಿಯಾಗಿ, ನಾನು ಕೆಲವು ಕೆಲಸಗಳನ್ನು ಮಾಡಬಲ್ಲೆ. ಇದರ ಜೊತೆದೆ ರಾಜಕೀಯ ಶಕ್ತಿ ಕೂಡ ದೊರತರೆ, ಮತ್ತಷ್ಟು ಒಳ್ಳೆಯ ಕೆಲಸ ಮಾಡಬಹುದು ಎಂಬುದು ನನ್ನ ಚಿಂತನೆಯಾಗಿತ್ತು ಎಂದು ಹೇಳಿದರು.

SCROLL FOR NEXT