ಕೆ ಎಚ್ ಮುನಿಯಪ್ಪ ಮತ್ತು ಎಚ್ ಸಿ ಮಹಾದೇವಪ್ಪ
ಕೆ ಎಚ್ ಮುನಿಯಪ್ಪ ಮತ್ತು ಎಚ್ ಸಿ ಮಹಾದೇವಪ್ಪ  
ರಾಜಕೀಯ

ಕುಟುಂಬಸ್ಥರಿಗೆ ಟಿಕೆಟ್ ಕೊಡಿಸಲು ಇಬ್ಬರು ಪ್ರಭಾವಿ ಸಚಿವರ ಲಾಬಿ: ಕಾಂಗ್ರೆಸ್ ಪಟ್ಟಿ ಮತ್ತಷ್ಟು ವಿಳಂಬ

Shilpa D

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಕೋಲಾರ ಕ್ಷೇತ್ರದಿಂದ ತಮ್ಮ ಅಳಿಯ ಚಿಕ್ಕಪೆದ್ದಪ್ಪ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿರುವುದರಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಉಳಿದ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ವಿಳಂಬವಾಗಿದೆ.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಮರಾಜನಗರದಿಂದ ಪುತ್ರ ಸುನೀಲ್ ಬೋಸ್ ಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಬಿಜೆಪಿ-ಜೆಡಿಎಸ್ ತನ್ನ ಪಟ್ಟಿ ಪ್ರಕಟಿಸಲಿ ಎಂದು ಕಾಯುತ್ತಿದೆ. ವಿಶೇಷವಾಗಿ ಕೋಲಾರಕ್ಕೆ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಮೊದಲು ಘೋಷಿಸಲಿ ಎಂದು ಕಾಂಗ್ರೆಸ್ ಕಾಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎರಡೂ ಸ್ಥಾನಗಳು ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿವೆ. ಸ್ಥಳೀಯ ಶಾಸಕರಿಂದ ಈ ಅಭ್ಯರ್ಥಿಗಳಿಗೆ ಯಾವುದೇ ಬೆಂಬಲವಿಲ್ಲದಿದ್ದರೂ, ಇಬ್ಬರು ಸಚಿವರು ಟಿಕೆಟ್ ಗಾಗಿ ಲಾಬಿ ನಡೆಸುತ್ದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ತಂತ್ರದ ಭಾಗವಾಗಿ, ಜೆಡಿಎಸ್ ಭೋವಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಡಾ ಎಲ್ ಹನುಮಂತಯ್ಯ ಅಥವಾ ಎಸ್‌ಸಿ ಬಲ ಪಂಗಡದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಮಾಜಿ ಸಂಸದ ವಿಎಸ್ ಉಗ್ರಪ್ಪ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರೂ ಬಳ್ಳಾರಿಗೆ ಸಂಡೂರು ಶಾಸಕ ಇ ತುಕಾರಾಂ ಅವರನ ಹೆಸರನ್ನು ಪಕ್ಷ ಅಂತಿಮಗೊಳಿಸಿದೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಎಚ್‌ಎನ್‌ ಶಿವಶಂಕರರೆಡ್ಡಿ ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಸಿದ್ದರು, ಆದರೆ ಮಾಜಿ ಸಚಿವ ಸೀತಾರಾಮ್‌ ಪುತ್ರ ರಕ್ಷಾ ರಾಮಯ್ಯ ಪ್ರಬಲ ಆಕಾಂಕ್ಷಿಯಾಗಿ ಕಣಕ್ಕಿಳಿದಿದ್ದಾರೆ. ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಹೈಕಮಾಂಡ್‌ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ನಾಲ್ಕು ಸ್ಥಾನಗಳ ಪಟ್ಟಿ ಸೋಮವಾರ ಅಥವಾ ಮಂಗಳವಾರ ಹೊರಬೀಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಭಾನುವಾರ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಕ್ಷೇತ್ರದ ಎಲ್ಲಾ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಪಕ್ಷದ ಮುಖಂಡರು ಮುನಿಯಪ್ಪ ಅವರ ಬೇಡಿಕೆಗೆ ಒಪ್ಪುವುದಿಲ್ಲ ಎಂದು ಹೇಳಿದರು.

ಎಸ್‌ಸಿ ಬಲ ಸದಸ್ಯ ಹಾಗೂ ಕೋಲಾರ ಸ್ಥಳೀಯ ಮುಖಂಡ ಸಿ.ಎಂ.ಮುನಿಯಪ್ಪ ಅವರ ಹೆಸರನ್ನು ಕೋಲಾರ ಕ್ಷೇತ್ರಕ್ಕೆ ರಮೇಶ್ ಕುಮಾರ್ ಸೂಚಿಸಿದ್ದಾರೆ. ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸಿದ ನಂತರ ನಿರ್ಧರಿಸುವ ಸಾಧ್ಯತೆಯಿದೆ.

ಚಾಮರಾಜನಗರದಲ್ಲಿ ಮಹದೇವಪ್ಪ ಅವರನ್ನು ಕಣಕ್ಕಿಳಿಸಿ ರಾಷ್ಟ್ರರಾಜಕಾರಣಕ್ಕೆ ಕಳುಹಿಸುವ ಯೋಜನೆ ಸಿದ್ದರಾಮಯ್ಯ ಹೊಂದಿದ್ದರು, ತಮ್ಮ ನಿಷ್ಠಾವಂತರೊಬ್ಬರಿಗೆ ಸಚಿವ ಸ್ಥಾನ ನೀಡುವ ಉದ್ದೇಶ ಸಿದ್ದರಾಮಯ್ಯ ಅವರಿಗಿತ್ತು. ಆದರೆ ಮಹದೇವಪ್ಪ ಇದಕ್ಕೆ ಸಾರಾಸಗಟಾಗಿ ನಿರಾಕರಿಸಿದ್ದು, ಇದೀಗ ಸುನೀಲ್ ಬೋಸ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಬ್ಬ ಪ್ರಬಲ ಆಕಾಂಕ್ಷಿ ಮಾಜಿ ಶಾಸಕ ನಂಜುಂಡಸ್ವಾಮಿ ಖರ್ಗೆ ಅವರನ್ನು ಭೇಟಿ ಮಾಡಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಮಹದೇವಪ್ಪ ಸ್ಪರ್ಧಿಸದೇ ಇದ್ದರೆ ಕಾಂಗ್ರೆಸ್‌ಗೆ ಕ್ಷೇತ್ರ ಗೆಲ್ಲುವುದು ಕಷ್ಟ ಎಂದು ಸಮೀಕ್ಷೆಯೊಂದು ಹೇಳಿದೆ

SCROLL FOR NEXT