ಬೆಂಗಳೂರು: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅನವಶ್ಯಕವಾಗಿ ತಮ್ಮ ಕುಟುಂಬದ ಒಳ ಜಗಳವನ್ನು ಕಾಂಗ್ರೆಸ್ ಪಕ್ಷ, ಡಿ.ಕೆ.ಶಿವಕುಮಾರ್ ಅವರ ಮೇಲೆ ಹಾಕುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಮತ್ತು ಸಂವಹನ ಮುಖ್ಯಸ್ಥ ರಮೇಶ್ ಬಾಬು ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಚಾರದಲ್ಲಿ ಶಿವಕುಮಾರ್ ಕೈವಾಡವಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಏಕೆಂದರೆ ಮಂಗಳವಾರ ಬೆಳಿಗ್ಗೆ ಅಮಿತ್ ಶಾ ಅವರು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಜೊತೆ ಮಾತನಾಡಿದಾಗ, ಈ ಘಟನೆಯಿಂದ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಹಾನಿಯಾಗಿದೆ. ಈ ಪ್ರಕರಣವನ್ನು ನೀವೇಕೆ ಮೊದಲೇ ಸರಿ ಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಇದು ಕುಮಾರಸ್ವಾಮಿ ಕೋಪಕ್ಕೆ ಕಾರಣವಾಗಿದೆ ಎಂದರು.
ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಅವರ ಸಹೋದರ ಎಚ್‌ಡಿ ರೇವಣ್ಣ ಅವರ ಕುಟುಂಬಗಳ ನಡುವೆ ವೈಷಮ್ಯವಿದೆ ಎಂದು ಈ ಹಿಂದೆ ಜೆಡಿಎಸ್ ಎಂಎಲ್ ಸಿಯಾಗಿದ್ದ ರಮೇಶ್ ಬಾಬು ಆರೋಪಿಸಿದ್ದಾರೆ.
ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣ ಹುಣಸೂರು, ಕೆಆರ್ ನಗರ ಮತ್ತು ಹಾಸನ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಣ್ಣಿಟ್ಟಿದ್ದರು ಆದರೆ ಕುಮಾರಸ್ವಾಮಿ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಿಗೆ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು. ಆಂತರಿಕ ಕಲಹದಿಂದಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು 2019ರಲ್ಲಿ ತಮ್ಮ ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರಜ್ವಲ್‌ಗೆ ತ್ಯಾಗ ಮಾಡಿದರು ಎಂದು ಹೇಳಿದರು.
ಕುಮಾರಸ್ವಾಮಿ ಅವರು ಕಾಂಗ್ರೆಸ್, ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅನಗತ್ಯವಾಗಿ ದೂಷಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪ್ರಜ್ವಲ್ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಮಾಡುವ ಮೊದಲೇ ಬಿಜೆಪಿ ನಾಯಕರಾದ ದೇವರಾಜೇಗೌಡ ಮತ್ತು ಪ್ರೀತಂ ಗೌಡ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪೆನ್ ಡ್ರೈವ್ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.