ಪ್ರತಿಪಕ್ಷಗಳಿಂದ ನೀವು ಕಾರ್ಯವೈಖರಿ ಇಲ್ಲದವರೆಂದು ಬಿಂಬಿಸಲಾಗುತ್ತಿದೆ, ಕಳೆದ ಐದು ವರ್ಷಗಳಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಜನತೆಗೆ ಏನೂ ಮಾಡಿಲ್ಲವೇ. ಈ ಬಗ್ಗೆ ನೀವು ಏನು ಹೇಳುತ್ತೀರಿ?
ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ನವರು 100 ಬಾರಿ ಸುಳ್ಳು ಹೇಳಿದರೆ ಜನ ನಂಬುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಜನರು ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ನಿರ್ಣಯಿಸುವಷ್ಟು ಬುದ್ಧಿವಂತರಾಗಿದ್ದಾರೆ. ಉದಾಹರಣೆಗೆ, ಕಳೆದ ತಿಂಗಳು ಆರಂಭವಾದ ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸಂಚಾರ ಒಂದೇ ವಾರದಲ್ಲಿ ನಿಂತುಹೋಯಿತು ಎಂದು ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದು ನಿಂತಿಲ್ಲ ಎಂದು ಜನರಿಗೆ ತಿಳಿದಿದೆ, ವಾರದಲ್ಲಿ ಆರು ದಿನ ಚಾಲನೆಯಲ್ಲಿದೆ.
ಕಳೆದ ಐದು ವರ್ಷಗಳಲ್ಲಿ ನಿಮ್ಮ ಪ್ರಮುಖ ಕೊಡುಗೆಗಳೇನು?
ಕೇಂದ್ರ ಸರ್ಕಾರದ ಮೇಲಿನ ನಿರಂತರ ಒತ್ತಡ ಹಾಕಿದ್ದರಿಂದ ಕಲಬುರಗಿ ಬಳಿ 1,000 ಎಕರೆಗೂ ಹೆಚ್ಚು ಜಾಗದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸುವುದಾಗಿ ಘೋಷಿಸಿದೆ. ಪ್ರಧಾನಿ ಈಗಾಗಲೇ ಯೋಜನೆಗೆ ಚಾಲನೆ ನೀಡಿದ್ದಾರೆ. ಇದು ಕಾರ್ಯಾರಂಭಿಸಿದ ನಂತರ 1 ಲಕ್ಷ ಜನರಿಗೆ ನೇರ ಉದ್ಯೋಗ ಮತ್ತು 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗಗಳನ್ನು ಒದಗಿಸಲಿದೆ. ಇದು ಸಣ್ಣ ಕೆಲಸ ಎಂದು ನೀವು ಭಾವಿಸುತ್ತೀರಾ? ಮಲ್ಲಿಕಾರ್ಜುನ ಖರ್ಗೆ ಅವರು ಎರಡು ಅವಧಿಗೆ ಸಂಸದರಾಗಿದ್ದು, ರೈಲ್ವೆ ಸಚಿವರೂ ಆಗಿದ್ದರೂ ಕಲಬುರಗಿಯಿಂದ ಬೆಂಗಳೂರಿಗೆ ನೇರ ರೈಲು ಆರಂಭಿಸಲು ಸಾಧ್ಯವಾಗಿರಲಿಲ್ಲ. ಆದರೆ ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್ ಸಂಚರಿಸುತ್ತಿದೆ.
ಕೇಂದ್ರ ಸರ್ಕಾರದ ವಿರುದ್ಧದ ಆರೋಪಗಳ ಬಗ್ಗೆ ನೀವೇನು ಹೇಳುತ್ತೀರಿ?
ಕಳೆದ 10 ವರ್ಷಗಳಲ್ಲಿ ನನ್ನ ಸರ್ಕಾರ ಏನು ಮಾಡಿದೆ, ಅವರ ಸರ್ಕಾರ ಏನು ಮಾಡಿದೆ ಎಂಬುದರ ಬಗ್ಗೆ ಚರ್ಚಿಸಲು ಕಳೆದ ಚುನಾವಣೆಯಲ್ಲಿ ನಾನು ಸೋಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ನನ್ನ ಎದುರಾಳಿ ರಾಧಾಕೃಷ್ಣ ದೊಡ್ಡಮನಿ ಬಹಿರಂಗ ಚರ್ಚೆಗೆ ಬರಲಿ ಅವರಿಗೆ ನನ್ನ ಮುಕ್ತ ಆಹ್ವಾನ. ಕಳೆದ 50 ವರ್ಷಗಳಲ್ಲಿ ಮತ್ತು ಕಳೆದ ಐದು ವರ್ಷಗಳಲ್ಲಿ ನಾನು ಏನು ಮಾಡಿದ್ದೇನೆ ಎಂಬ ಬಗ್ಗೆ ತಿಳಿಸುತ್ತೇನೆ. ಅವರು ನನ್ನ ಆಹ್ವಾನವನ್ನು ಸ್ವೀಕರಿಸಿದರೆ, ಅದು ಸ್ಪಷ್ಟವಾಗುತ್ತದೆ.
ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸದಿದ್ದರೂ ಖರ್ಗೆ ಮತ್ತು ಪ್ರಧಾನಿ ನರೇಂದ್ರ ಮೋದಿ, ಅಥವಾ ಖರ್ಗೆ ಮತ್ತು ಡಾ. ಉಮೇಶ್ ಜಾಧವ್ ನಡುವೆ ಚುನಾವಣೆ ಎಂದು ನೀವು ಭಾವಿಸುತ್ತೀರಾ?
ಇಲ್ಲ ನನ್ನ ಬಗ್ಗೆ ಸುಳ್ಳು ಹೇಳುವ, ಟೀಕೆ ಮಾಡುವಲ್ಲಿ ಮುಂದಾಳತ್ವ ವಹಿಸಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಡಾ.ಉಮೇಶ ಜಾಧವ್ ನಡುವೆ ಚುನಾವಣೆ ನಡೆಯುತ್ತಿದೆ.
ನೀವು ಗೆಲ್ಲುವ ಬಗ್ಗೆ ಎಷ್ಟು ವಿಶ್ವಾಸವಿದೆ?
ನಾನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಜನರ ಪ್ರೀತಿ ಮತ್ತು ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡುವ ಅವರ ಬಯಕೆ ಮತ್ತು ಕ್ಷೇತ್ರದಲ್ಲಿ ನನ್ನ ಕೆಲಸಗಳು ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡುತ್ತವೆ.