ಮಂಗಳೂರು: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ವಿಧಾನ ಪರಿಷತ್ ಚುನಾವಣೆ ಕಣ ರಂಗು ಪಡೆದಿದೆ. ಜೂನ್ 3ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಪಕ್ಷದಿಂದ ಟಿಕೆಟ್ ಸಿಗದ್ದಕ್ಕೆ ಅಸಮಾಧಾನಗೊಂಡಿರುವ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಜ ಅವರು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. 'ಈ ಹಿಂದೆ ಉಡುಪಿ ಶಾಸಕನಾಗಿದ್ದ ನಾನು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದೇನೆ. ನನ್ನೊಂದಿಗೆ ಚರ್ಚೆಯನ್ನೂ ನಡೆಸದೆ ಟಿಕೆಟ್ ನಿರಾಕರಿಸಿದ್ದಾರೆ. ವಿವಿಧ ಸಂಸ್ಥೆಗಳ ಮುಖ್ಯಸ್ಥರು ಮತ್ತು ಹಿತೈಷಿಗಳಿಂದ ನನಗೆ ಕರೆಗಳು ಬಂದಿದ್ದು, ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಇದು ಪ್ರಧಾನಿ ಅಥವಾ ಸಿಎಂ ನಿರ್ಧರಿಸುವ ಚುನಾವಣೆಯಲ್ಲ. ನಾನು ಗೆದ್ದರೂ ಬಿಜೆಪಿಗೆ ಯಾವುದೇ ನಷ್ಟವಿಲ್ಲ, ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ನನ್ನ ಸ್ಪರ್ಧೆಯು ಬಿಜೆಪಿ ವಿರುದ್ಧದ ಬಂಡಾಯವಲ್ಲ ಎಂದು ಹೇಳಿದರು.
ನನ್ನ ಎಲ್ಲಾ ಕಹಿ ಅನುಭವಗಳನ್ನು ನಾನು ಬಿಜೆಪಿ ನಾಯಕರಿಗೆ ವಿವರವಾಗಿ ವಿವರಿಸಿದ್ದೇನೆ, ಕೆಲವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಎಂಎಲ್‌ಸಿಯಾಗಿ ಕೆಲಸ ಮಾಡಲು ಬಯಸುತ್ತಿದ್ದೇನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಉಡುಪಿಯಿಂದ ಸ್ಪರ್ಧಿಸಲು ಕೊನೆ ಗಳಿಗೆಯಲ್ಲಿ ನನಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಈ ಸುದ್ದಿಯನ್ನು ಸುದ್ದಿ ವಾಹಿನಿಗಳ ಮೂಲಕ ತಿಳಿದುಕೊಂಡೆ. ದಕ್ಷ ನಾಯಕರಾಗಿರುವ ಯಶಪಾಲ್ ಸುವರ್ಣ ಅವರ ಪರ ಪ್ರಚಾರ ಮಾಡಿದ್ದೆ. ಆಗ ಇತರ ರಾಜಕೀಯ ಪಕ್ಷಗಳ ಆಫರ್‌ಗಳನ್ನು ನಾನು ನಿರ್ಲಕ್ಷಿಸಿದ್ದೆ.
ಟಿಕೆಟ್ ನಿರಾಕರಿಸಿದ ಬಳಿಕ ರಾಜಕೀಯ ಜೀವನದಿಂದ ನಿವೃತ್ತಿಯಾಗುವ ಯೋಚನೆಯಲ್ಲಿದ್ದೆ. ಪಕ್ಷವು ಯಶ್ಪಾಲ್ ಸುವರ್ಣರಂತಹ ಪ್ರಬಲ ನಾಯಕರಿಗೆ ಟಿಕೆಟ್ ನೀಡಿದ್ದರೆ ನನಗೆ ಹೆಚ್ಚಿನ ನೋವಾಗುತ್ತಿರಲಿಲ್ಲ. ಆದರೆ, ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ನಾಯಕನಿಗೆ ಟಿಕೆಟ್ ನೀಡಿರುವುದು ನನಗೆ ಹೆಚ್ಚು ನೋವುಂಟು ಮಾಡಿದೆ ಎಂದು ತಿಳಿಸಿದರು.