ಮಂಡ್ಯ: ಕಾಂಗ್ರೆಸ್ ಸರ್ಕಾರ ಬೀಳುತ್ತದೆ, 2028ರೊಳಗೆ ಕರ್ನಾಟಕ ಮುಖ್ಯಮಂತ್ರಿಯಾಗುತ್ತೇ ಎಂದು ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿು ಶನಿವಾರ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ 2028ರವರೆಗೂ ನಡೆಯುವುದಿಲ್ಲ. ಹಾಗೆಂದು ನಾವು ಸರ್ಕಾರವನ್ನು ಪತನಗೊಳಿಸುತ್ತೇವೆಂಬ ಅರ್ಥವಲ್ಲ. ಆ ಪಕ್ಷದ ಶಾಸಕರೇ ಅವರ ಸರ್ಕಾರವನ್ನು ಉರುಳಿಸಲಿದ್ದಾರೆ. ಹೀಗಾಗಿ 2028ರೊಳಗೆ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂದು ಹೇಳಿದರು.
ನಾನು ಯಾವಾಗಲೂ ಜನರಲ್ಲಿ ಕೇಳುವುದು ಒಂದೇ ಒಂದು. ನಾನು ಮುಖ್ಯಮಂತ್ರಿಯಾದರೆ ನನಗೆ ಐದು ವರ್ಷಗಳ ಸರ್ಕಾರ ಕೊಡಿ. ಅಂದರೆ ಬಹುಮತದ ಸರ್ಕಾರ ಕೊಡಿ ಅಂತ ಜನತೆಗೆ ಈಗಲೂ ಮನವಿ ಮಾಡುತ್ತೇನೆ. ಈ ಹಿಂದೆ ನನ್ನ 14 ತಿಂಗಳ ಆಡಳಿತ, ಬೇರೆಯವರ ಹಂಗಿನಲ್ಲಿ ಸರ್ಕಾರ ಮಾಡಿದ್ದು ಸಾಕಾಗಿದೆ. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದಾಗಲು ನಾಡಿಗೆ ಕೊಟ್ಟ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಉಳಿದಿದೆ. ಹಾಗಾಗಿ, ಐದು ವರ್ಷಗಳ ಸರ್ಕಾರ ಸಿಕ್ಕರೆ ನಾನು ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡುತ್ತೇನೆಂದು ತಿಳಿಸಿದರು.
ಕರ್ನಾಟಕ ಸಮೃದ್ಧಿಯ ನಾಡು. ಇಲ್ಲಿನ ಯಾವುದೇ ಕುಟುಂಬ ತಮ್ಮ ಬದುಕಿಗಾಗಿ ಮತ್ತೊಬ್ಬರ ಬಳಿ ಕೈ ಚಾಚಬಾರದು. ಇನ್ನೊಬ್ಬರಿಗೆ ಕೈ ಎತ್ತಿ ಕೊಡುವ ಆರ್ಥಿಕ ಶಕ್ತಿ ಕೊಡುವ ರಾಜ್ಯ ಇದು. ಅದೇ ಶಕ್ತಿ ಎಲ್ಲಾ ಕುಟುಂಬಕ್ಕೆ ಸಿಗುವಂತಾಗಬೇಕು ಎಂದು ತಿಳಿಸಿದರು.
ಇದೇ ವೇಳೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಉತ್ತಮ ಆಡಳಿತ ಮಾಡುತ್ತಾರೆಂದು ಜನ ಇವರಿಗೆ (ಕಾಂಗ್ರೆಸ್) ಬಹುಮತದ ಸರ್ಕಾರ ಮಾಡಿಕೊಟ್ಟಿದ್ದಾರೆ. ಆದರೆ, ಇವತ್ತು ಹಣ ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿ ಕಬಳಿಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಪ್ರತಿ ಕುಟುಂಬವನ್ನು ಸ್ವಾವಲಂಬಿ ಮಾಡುವ ಅನೇಕ ಕಾರ್ಯಕ್ರಮಗಳಿವೆ. ಅವು ಜಾರಿಯಾದರೆ, ಇವರು ಕೊಡುವ 2 ಸಾವಿರ ಯಾರಿಗೂ ಬೇಕಾಗಿಲ್ಲ. ಕನಿಷ್ಠ 10 ಸಾವಿರ ಸಂಪಾದನೆ ಮಾಡುವ ಕಾರ್ಯಕ್ರಮಗಳು ನನ್ನ ಬಳಿ ಇವೆ ಎಂದರು.
ಕಾಂಗ್ರೆಸ್ ಸರ್ಕಾರದ ಈಗಿನ ನಡವಳಿಕೆಯ ಬಗ್ಗೆ ಹಾಗೂ ಇತ್ತೀಚಿನ ಬೆಳವಣಿಗೆಗೆ ಜನರು ಬೇಸತ್ತಿದ್ದಾರೆ. ಜನರಲ್ಲಿ ಸರ್ಕಾರದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ. ಜನರೇ ಈ ಸರ್ಕಾರವನ್ನು ತೆಗೆಯುತ್ತಾರೆ. ನಾವು ತೆಗೆಯಲು ಸಾಧ್ಯವಿಲ್ಲ ಜನರೇ ತೀರ್ಮಾನ ಮಾಡಬೇಕು. ಇಂಥ ಪರಿಸ್ಥಿತಿಯಲ್ಲಿ ಜನರೇ ತೀರ್ಮಾನ ಮಾಡುತ್ತಾರೆಂದು ಹೇಳಿದರು.
ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಸ್ಪೋಟ ಇದೆ. ಯಾವಾಗ ಸ್ಪೋಟ ಆಗುತ್ತೆ ಕಾದು ನೋಡೋಣ. ನಾವು ಅವರ ಸರ್ಕಾರ ಅಲ್ಲಾಡಿಸುತ್ತೇವೆಂದು ಹೇಳಿಲ್ಲ. ಸರ್ಕಾರದ ನಿಷ್ಕ್ರಿಯತೆ ಶಾಸಕರು ಹಳ್ಳಿಗೆ ಹೋಗಿ ಜನರನ್ನ ಭೇಟಿ ಮಾಡದ ಕಾರಣದಿಂದ ಇಂತಹ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರದ ನಡವಳಿಕೆ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಇರುವ ಸ್ಫೋಟ ಒಂದಿಲ್ಲೊಂದು ದಿನ ಸ್ಫೋಟ ಆಗುತ್ತೆ ಎಂದು ತಿಳಿಸಿದರು.