ಬೆಂಗಳೂರು: ಚನ್ನಪಟ್ಟಣವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ, ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಮನಗರ ಕ್ಷೇತ್ರದಿಂದ ಹೊರಗಟ್ಟಬೇಕು ಎಂಬ ಛಲಕ್ಕೆ ಬಿದ್ದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಚುನಾವಣೆ ಇದಾಗಿದೆ. ಮುಖ್ಯಮಂತ್ರಿಯಾಗುವ ಕನಸು ಹೊತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಚನ್ನಪಟ್ಟಣದಲ್ಲಿ ಎಚ್ಚರಿಕೆಯ ಆಟವಾಡುತ್ತಿದ್ದಾರೆ.
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಕುಟುಂಬವನ್ನು ಚುನಾವಣಾ ಕದನದಲ್ಲಿ ನೇರವಾಗಿ ಎದುರಿಸಲು ಅವರು ತಮ್ಮನ್ನು ತಾವು ಪಣಕ್ಕಿಟ್ಟುಕೊಂಡಿದ್ದಾರೆ. ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧಿಸುತ್ತಾರೆ ಎಂದು ತಿಳಿದಿದ್ದ ಶಿವಕುಮಾರ್, ಸುರೇಶ್ ಅವರನ್ನು ಕಣಕ್ಕಿಳಿಸದೆ ಮುಂಬರುವ ಅಪಾಯದಿಂದ ದೂರ ಉಳಿದಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ಗೆ ತೆರಳಿ ಪಕ್ಷದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅವರಿಗೆ ಬೆಂಬಲ ನೀಡಿರುವುದರಿಂದ ಡಿಕೆಶಿ ಬ್ರದರ್ಶ್ ನಿರಾಳರಾಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಇದೇ ತಂತ್ರವನ್ನು ಅನುಸರಿಸಿ ರಾಮನಗರದಲ್ಲಿ ನಿಖಿಲ್ ಅವರನ್ನು ಸೋಲಿಸಿ ತಮ್ಮ ಬೆಂಬಲಿಗ ಎಚ್‌ಎ ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸಿದ್ದರು. ಅಧಿಕಾರದಲ್ಲಿದ್ದ ಪಕ್ಷ ಉಪ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ‘ಪರಂಪರೆ’ಯನ್ನು ಮುಂದುವರಿಸುವ ಸವಾಲು ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕಿಳಿಸಿದಾಗ ಡಿ.ಕೆ ಬ್ರದರ್ಸ್ ಆಶ್ಚರ್ಯಚಕಿತರಾಗಿದ್ದರು ಆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಕೆ ಸುರೇಶ್ ಪರಾಭವಗೊಂಡರು. ಸಿದ್ದರಾಮಯ್ಯನವರ ನಂತರ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಶಿವಕುಮಾರ್‌ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಡೆದಿದ್ದ ಒಪ್ಪಂದಕ್ಕೆ ಹಿನ್ನಡೆಯಾಗಿದೆ ಎಂಬ ಮಾತುಗಳ ಕೇಳಿಬರುತ್ತಿವೆ.
ಒಂದು ವೇಳೆ ಚನ್ನಪಟ್ಟಣದಲ್ಲಿ ಮತ್ತೆ ಸುರೇಶ್ ಸ್ಪರ್ಧಿಸಿ ಸೋತಿದ್ದರೆ ಶಿವಕುಮಾರ್ ಅವರ ಇಮೇಜ್ ಗೆ ಧಕ್ಕೆಯಾಗುತ್ತಿತ್ತು. ಆದ್ದರಿಂದ, ಅವರು ತಮ್ಮ ಆರಾಧ್ಯ ದೈವ 'ಅಜ್ಜಯ್ಯ ಸ್ವಾಮಿ'ಯ ಸಲಹೆಯ ಪಾಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಕ್ಕಲಿಗ ಹೃದಯ ಭಾಗದಲ್ಲಿ ಪ್ರಬಲವಾಗಿರುವ ದೇವೇಗೌಡರ ಕುಟುಂಬವನ್ನು ಡಿ.ಕೆ ಬ್ರದರ್ಸ್ ಟಾರ್ಗೆಟ್ ಮಾಡಿದ್ದಾರೆ.
ಸುರೇಶ್ ಸೋಲಲು ಹಾಗೂ ಡಾ ಮಂಜುನಾಥ್ ಅವರ ಗೆಲುವಿಗೆ ಶ್ರಮಿಸಿದ ತಮ್ಮ ಒಕ್ಕಲಿಗ ಮುಖಂಡ ಯೋಗೇಶ್ವರ್ ಜೊತೆ ಶಾಂತಿ ಸಂಧಾನ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಕರೆತಂದಿದ್ದಾರೆ. ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ನಿರ್ಧಾರವು ಈ ಭಾಗದಲ್ಲಿ ಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಪ್ರಾಬಲ್ಯಗೊಳಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಚನ್ನಪಟ್ಟಣದ ಜನರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 85,000 ಮತಗಳನ್ನು ನೀಡಿದ್ದಾರೆ, ಬಿಜೆಪಿ 1 ಲಕ್ಷ ಮತ ಗಳಿಸಿತ್ತು. ಯೋಗೇಶ್ವರ ಅವರು ಇದನ್ನು ಅರಿತು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಎನ್‌ಡಿಎ ಮಿತ್ರಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ಬದಲಾಗಿರುವ ಕುಮಾರಸ್ವಾಮಿ ಅವರು ತಮ್ಮ ತಂದೆ ದೇವೇಗೌಡರಂತೆಯೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ,ಹೀಗಾಗಿ ಎಚ್ ಡಿಕೆ ಹಣಿಯಲು ಡಿ.ಕೆ ಸಹೋದರರು ಬಯಸಿದ್ದಾರೆ.
ಪಕ್ಷವೂ ಬಿಕ್ಕಟ್ಟಿನಲ್ಲಿ ಸಿಲುಕಿದಾಗ ಜೆಡಿಎಸ್ ನಾಯಕರು ಯಾವಾಗಲೂ ಕಮ್ಯೂನಿಟಿ ಕಾರ್ಡ್ ಬಳಸುವುದರ ಜೊತೆಗೆ ಕುಟುಂಬದ ಸದಸ್ಯರನ್ನು ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸುತ್ತದೆ. ಈ ಬಾರಿ ಚನ್ನಪಟ್ಟಣನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದೆ. ಕಾರ್ಯಕರ್ತರ ಒತ್ತಡದ ಮೇರೆಗೆ ನಿಖಿಲ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಚುನಾವಣಾ ಗೆಲುವಿನ ರುಚಿ ನೋಡದ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶವು ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ