ಬೆಂಗಳೂರು: ಒಳಮೀಸಲಾತಿ ಅನುಷ್ಠಾನ, ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಮೀಸಲಾತಿ ಪರಿಷ್ಕರಣೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರ ನವೆಂಬರ್ 13ರಂದು ನಡೆಯಲಿರುವ ಚನ್ನಪಟ್ಟಣ, ಶಿಗ್ಗಾಂವ ಮತ್ತು ಸಂಡೂರು ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ನಿರ್ಧಾರದಿಂದ ಕಾಂಗ್ರೆಸ್ ನಾಯಕರು ಸಂತಸಗೊಂಡಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಚಿವ ಡಾ.ಎಲ್.ಹನುಮಂತಯ್ಯ ಸೇರಿದಂತೆ ಎಸ್ಸಿ ಎಡ (ಮಾದಿಗ) ಸಮುದಾಯದ ಕಾಂಗ್ರೆಸ್ ಮುಖಂಡರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಮೂಲಗಳ ಪ್ರಕಾರ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಲು ನಿಯೋಜಿಸಲ್ಪಡಿರುವ ನಾಯಕರು ಈ ಕ್ಷೇತ್ರಗಳಲ್ಲಿ ಉತ್ಸಾಹದಿಂದ ಕೆಲಸ ಮಾಡುವ ನಿರೀಕ್ಷೆಯಿದೆ. ಈ ಪ್ರತಿಯೊಂದು ಕ್ಷೇತ್ರಗಳಲ್ಲಿ ಸರಾಸರಿ 30,000-35,000 ಪರಿಶಿಷ್ಟ ಜಾತಿ ಮತದಾರರಿದ್ದಾರೆ. ಚನ್ನಪಟ್ಟಣದಲ್ಲಿ ಎಸ್‌ಸಿ (ಬಲ) ಮತದಾರರು ಪ್ರಾಬಲ್ಯ ಹೊಂದಿದ್ದರೆ, ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ಹೆಚ್ಚಿನ ಸಂಖ್ಯೆಯ ಎಸ್‌ಸಿ (ಎಡ) ಮತದಾರರಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಡೂರಿನಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಇ ಅನ್ನಪೂರ್ಣ ಅವರಿಗೆ ಭಾರೀ ಪೈಪೋಟಿಯಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿ ಮತ್ತು ಜೆಡಿಎಸ್ ಜಯಗಳಿಸಿದ ಶಿಗ್ಗಾಂವ್ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಎಸ್‌ಸಿ (ಎಡ) ಸಮುದಾಯದ ಮತದಾರರ ಬೆಂಬಲದೊಂದಿಗೆ ಈ ಬಾರಿ ಕಠಿಣ ಹೋರಾಟ ನೀಡಬಹುದು ಎಂದು ಸಮುದಾಯದ ಮುಖಂಡರೊಬ್ಬರು ಹೇಳುತ್ತಾರೆ.
ಮುಂಬರುವ ಉಪಚುನಾವಣೆಯಲ್ಲಿ ಸಮುದಾಯವು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕಾದರೆ, ಸರ್ಕಾರ ಆಂತರಿಕ ಮೀಸಲಾತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ನಾವು ಸಿಎಂಗೆ ಒತ್ತಡ ಹೇರಿದ್ದೇವೆ, ಅವರು ಅದನ್ನು ಮಾಡಿದ್ದಾರೆ ಎಂದು ಎಸ್‌ಸಿ (ಎಡ) ಸಮುದಾಯದ ನಾಯಕರೊಬ್ಬರು ಟಿಎನ್‌ಐಇಗೆ ತಿಳಿಸಿದರು.
ಮಾದಿಗರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯ ಮಾಡಿದ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದು ಮುಂಬರುವ ಉಪಚುನಾವಣೆಯಲ್ಲಿ ಗೊತ್ತಾಗಲಿದೆ. ನಮ್ಮ ಸಮುದಾಯದ ಎಲ್ಲರೂ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದು ಆಂಜನೇಯ ಹೇಳಿದರು.
ಇದು ಒಳ ಮೀಸಲಾತಿ ಹೋರಾಟಕ್ಕೆ ಸಂದ ಜಯ. ಸಿದ್ದರಾಮಯ್ಯನವರಿಂದ ಇದು ಸಾಧ್ಯವಾಯಿತು ಎಂದು ತಿಮ್ಮಾಪುರ ಹೇಳಿದರು.
'ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಸುತ್ತಿದೆ. ಇದೀಗ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದ್ದು ಅದನ್ನು ಕಾರ್ಯಗತಗೊಳಿಸಬೇಕು. 101 ಪರಿಶಿಷ್ಟ ಜಾತಿಗಳಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಎಲ್ಲರನ್ನೂ ಸಂತೋಷವಾಗಿಡಲು ಸಾಧ್ಯವಾಗದಿದ್ದರೂ ಶೇ.90ರಷ್ಟು ಈ ಸಮುದಾಯಗಳನ್ನು ತೃಪ್ತಿಪಡಿಸುವ ನಿರ್ಧಾರ ಕೈಗೊಳ್ಳಬೇಕಿದೆ. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಗೃಹ ಸಚಿವ ಡಾ.ಪರಮೇಶ್ವರ ಅವರ ನಿವಾಸದಲ್ಲಿ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಎಂಎಲ್‌ಸಿ ಎಚ್.ಪಿ.ಸುಧಾಮದಾಸ್ ನೇತೃತ್ವದಲ್ಲಿ ನಡೆದ ದಲಿತ ಶಾಸಕರ ಸಭೆಯಲ್ಲಿ ಒಳಮೀಸಲಾತಿಗೆ ಎಲ್ಲರೂ ಒಲವು ತೋರುವ ಬಗ್ಗೆ ಒಮ್ಮತಕ್ಕೆ ಬರಲಾಯಿತು.
2023ರ ವಿಧಾನಸಭಾ ಚುನಾವಣೆಗೆ ಮುನ್ನ ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಈ ಸಮುದಾಯಗಳಿಗೆ ಭರವಸೆ ನೀಡಿದ್ದರಿಂದ ಆಂತರಿಕ ಕೋಟಾವನ್ನು ಜಾರಿಗೆ ತರಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು. ಇದನ್ನು ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದ್ದೇವೆ ಎಂದರು.