ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯ (ಅಹಮದಾಬಾದ್) ದಿಂದಲೇ ದೇಶಕ್ಕೆ ಬಲವಾದ ಸಂದೇಶ ರವಾನಿಸುತ್ತೇವೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಮದಾಬಾದ್ ನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆ ಸೋಮವಾರ ನಡೆಯಲಿದ್ದು, ಸಭೆಯಲ್ಲಿ ದೇಶದ ಬಗ್ಗೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಗುವುದು. ಯಾವ ವಿಷಯಗಳ ಮೇಲೆ ಚರ್ಚೆ ಎಂದು ಈಗಲೇ ಹೇಳಲಾಗಲ್ಲ, ಹಿಂದೆ ನಡೆದ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆಯೂ ಚರ್ಚಿಸಲಾಗುವುದು. ಸಭೆಯ ನಂತರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.
ಬಳಿಕ ದೇಶಕ್ಕೆ ಅಧಿಕೃತ ಸಂದೇಶ ಕೊಡುತ್ತೇವೆ. ಏನು ಸಂದೇಶ ಕೊಡ್ತೇವೆ ಅದನ್ನು ಇಲ್ಲಿ ಹೇಳುವುದು ಸರಿಯಲ್ಲ ಎಂದು ತಿಳಿಸಿದರು.
202ನೇ ಸಾಲಿನಲ್ಲಿ ಪಕ್ಷ ಸಂಘಟನೆ ವರ್ಷದ ಹಿನ್ನಲೆಯಲ್ಲಿ ನೇಮಕಾತಿಗಳು ಬಾಕಿ ಉಳಿದಿರುವ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು, ಎಲ್ಲಾ ಹುದ್ದೆಗಳ ನೇಮಕಾತಿ ಮಾಡುತ್ತಿದ್ದೇವಲ್ಲಾ. ಬಿಹಾರ ಮಾಡಿದ್ದೇವೆ, ಉತ್ತರಪ್ರದೇಶದಲ್ಲಿ ಮಾಡಿದ್ದೇವೆ. ಮೊನ್ನೆ ಅಸ್ಸಾಂ ನಲ್ಲೂ ಮಾಡಿದ್ದೇವೆ. ಒಂದೊಂದೇ ಮಾಡುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಈ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಎಐಸಿಸಿ ಅಧಿವೇಶನ ಗುಜರಾತ್ ನ ಅಹಮದಾಬಾದ್‌ನಲ್ಲಿ 64 ವರ್ಷಗಳ ಬಳಿಕ ನಡೆಯುತ್ತಿದೆ. ಈ ಹಿಂದೆ ಅಹಮದಾಬಾದ್ ನಲ್ಲಿ 1902 ಹಾಗೂ 1921 ರಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಇದೀಗ 64 ವರ್ಷಗಳ ಬಳಿಕ ಮತ್ತೆ ಗುಜರಾತ್ ನಲ್ಲಿ ಅಧಿವೇಶನ ಹಮ್ಮಿಕೊಳ್ಳಲಾಗಿದೆ.
ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಎಐಸಿಸಿ ಪ್ರಮುಖರು ಭಾಗಿಯಾಗಲಿದ್ದಾರೆ.