ಬೆಂಗಳೂರು: "ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1" ಎಂದು ನಾನು ಯಾವತ್ತೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪು ಅರ್ಥ ಬರುವಂತೆ ಬಿಂಬಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳದಲ್ಲಿ ನಡೆದ ಪ್ರಾದೇಶಿಕ ಅಸಮತೋಲನ ಪರಿಹಾರ ಸಮಿತಿ ಸಭೆಯಲ್ಲಿ, ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅಧಿಕಾರಿಗಳಿಗೆ ಹೇಳಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ ನಂತರ ರಾಯರೆಡ್ಡಿ ಈ ಸ್ಪಷ್ಟೀಕರಣ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಯರೆಡ್ಡಿ, ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. "ಕರ್ನಾಟಕವನ್ನು ಅತ್ಯಂತ ಭ್ರಷ್ಟ ರಾಜ್ಯವೆಂದು ಬ್ರಾಂಡ್ ಮಾಡಲಾಗಿದೆ" ಎಂಬುದನ್ನು ಎತ್ತಿ ತೋರಿಸಿದ್ದೇನೆ. ಆದರೆ ಅದನ್ನು ತಪ್ಪಾಗಿ ಬಿಂಬಿಸಿರುವುದು ದುರದೃಷ್ಟಕರ ಎಂದರು.
"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ನಾನು ಹೇಳಿಲ್ಲ. ಇದು ಕಳೆದ ಎರಡು ಮೂರು ದಶಕಗಳಿಂದ ಚಾಲ್ತಿಯಲ್ಲಿರುವ ವಿದ್ಯಮಾನ" ಎಂದು ರಾಯರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ನಾನು ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಅಂತಹ ಹೇಳಿಕೆ ನೀಡಿಲ್ಲ. ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದ ಮಾತುಗಳನ್ನು ಮಾಧ್ಯಮಗಳಲ್ಲಿ ತಪ್ಪು ಅರ್ಥ ಬರುವ ರೀತಿಯಲ್ಲಿ ಬಿಂಬಿಸಲಾಗಿದೆ. ಇದಕ್ಕೆ ನಾನು ಜವಾಬ್ದಾರನಲ್ಲ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಕಳಪೆ ಆಡಳಿತದಿಂದಾಗಿ ಅತ್ಯಂತ ಭ್ರಷ್ಟ ರಾಜ್ಯವೆಂದು ಬ್ರಾಂಡ್ ಮಾಡಲಾಗಿದೆ. ಇದಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರದ ಬಹುದೊಡ್ಡ ಕೊಡುಗೆ ಇದೆ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಯುತ ಆಡಳಿತವನ್ನು ಖಚಿತಪಡಿಸಿಕೊಳ್ಳುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ ಮತ್ತು ಕೃಷ್ಣ ಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ಅವರಂತಹ ಕ್ರಿಯಾಶೀಲ ಸಚಿವರು ಅವರಿಗೆ ಬೆಂಬಲ ನೀಡಿದ್ದಾರೆ ಎಂದು ರಾಯರೆಡ್ಡಿ ಹೇಳಿದರು.
"ನಮ್ಮ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ನಮ್ಮ ಮುಖ್ಯಮಂತ್ರಿ ಉತ್ತಮ ಕೆಲಸ ಮಾಡುತ್ತಿರುವುದರಿಂದ ನಾನು ಅವರನ್ನು ಬೆಂಬಲಿಸುತ್ತೇನೆ. ಅವರು ನನ್ನನ್ನು ಸಚಿವರನ್ನಾಗಿ ಮಾಡದಿದ್ದರೂ ಮತ್ತು ಈ ಹುದ್ದೆಯಿಂದ(ಆರ್ಥಿಕ ಸಲಹೆಗಾರ ಹುದ್ದೆ) ತೆಗೆದುಹಾಕಿದರೂ, ನಾನು ಅವರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇನೆ" ಎಂದು ರಾಯರೆಡ್ಡಿ ತಿಳಿಸಿದರು.