ಬೆಂಗಳೂರು: ಗಣಿ ಗುತ್ತಿಗೆ ನವೀಕರಣಕ್ಕೆ 500 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ಆರೋಪ ಕುರಿತು ಉತ್ತರ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಆಗ್ರಹಿಸಿದ್ದಾರೆ.
ನಗರದ ಫ್ರೀಡಂ ಪಾರ್ಕಿನಲ್ಲಿ ಜೆಡಿಎಸ್ ಆಯೋಜಿಸಿದ್ದ “ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಎಂಬ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಹಿಂದೆ ಅಧಿಕಾರದಲ್ಲಿದ್ದಾಗ ನನ್ನ ಧ್ವನಿ ಅಡಗಿಸುವ ಕೆಲಸ ಮಾಡಿದ್ದರು. ನನ್ನ ಕೆಣಕಿದರೆ ಅವರಿಗೆ ಕಷ್ಟ, ನಾನು ಯಾವುದೇ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ಎಲ್ಲದಕ್ಕೂ ನ್ಯಾಯ, ನ್ಯಾಯಾಲಯವಿದೆ. ಹೋರಾಟ ಮಾಡುತ್ತಿದ್ದೇನೆ. ನನ್ನಲ್ಲಿ ಅಧಿಕಾರ ಇದ್ದಾಗಲೂ ನಾನು ನನ್ನ ಕೆಲಸ ಮಾಡಿಕೊಳ್ಳಲಿಲ್ಲ. ಈಗ ಕೇಂದ್ರ ಸಚಿವನಾದ ಬಳಿಕವೂ ಕಾಂಗ್ರೆಸ್‌ನವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮೊದಲ ಅವಧಿಗೆ ಮುಖ್ಯಮಂತ್ರಿ ಆಗಿದ್ದಾಗ ಗಣಿ ಗುತ್ತಿಗೆ ನವೀಕರಣಕ್ಕೆ 500 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ಆರೋಪವನ್ನು ರಾಮಮೂರ್ತಿ ಗೌಡ ಮಾಡಿದ್ದು, ಅಭಿಯೋಜನೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಗಣಿ ಗುತ್ತಿಗೆ ನವೀಕರಣದಿಂದ ಸರಕಾರದ 5,000 ಕೋಟಿ ರೂ. ನಷ್ಟ ಉಂಟು ಮಾಡಿರುವ ಆರೋಪವ್ನು ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ. ಇದಕ್ಕೇನು ಉತ್ತರ ಕೊಡುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದರು.
ಕರ್ನಾಟಕದಲ್ಲಿ ಇಂತಹ ಕೆಟ್ಟ ಸರ್ಕಾರ ಎಂದೂ ಅಧಿಕಾರಕ್ಕೆ ಬಂದಿರಲಿಲ್ಲ. ಗ್ಯಾರಂಟಿ ಹೆಸರು ಹೇಳಿಕೊಂಡು ಬಂದ ಇವರು, ಈಗ ಜನರನ್ನು ಕಿತ್ತು ತಿನ್ನುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಹಾಗೆಂದರೆ ಜನರನ್ನು ಕಿತ್ತು ತಿನ್ನುವುದೇ? ಇದೇ ಸರಕಾರ ಮುಂದುವರಿದರೆ ರಾಜ್ಯದ ಸಾಲ 10 ಲಕ್ಷ ಕೋಟಿ ರೂ. ಆಗುತ್ತದೆ. ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರದ ಮುಂದೆ ಹೋಗಿ ಭಿಕ್ಷೆ ಬೇಡಲಿಲ್ಲ. ಜನ ಕೊಟ್ಟ ತೆರಿಗೆ ಹಣವನ್ನೇ ಬಳಸಿದೆ.
ಮೈತ್ರಿ ಸರ್ಕಾರ ಅವಧಿಯಲ್ಲಿ ಸಾಲಮನ್ನಾ ಮಾಡಿದೆ. ಆಗ ಜನರ ಮೇಲೆ ತೆರಿಗೆ ಹಾಕಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಗುತ್ತಿಗೆದಾರರಿಗೆ ತೊಂದರೆ ಕೊಟ್ಟಿದ್ದರೆ ನೀವು ಕೊಡುವ ಶಿಕ್ಷೆ ಅನುಭವಿಸುತ್ತೇನೆ ಎಂದು ಹೇಳಿದರು.
ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿವೆ ಎಂಬುದು ನಿಜ. ಯಾರೂ ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ. ಅವರು ಟ್ರಕ್‌ಗಳಷ್ಟು ನಕಲಿ ದಾಖಲೆಗಳನ್ನು ತರುವ ಮೂಲಕ ನನ್ನನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವುಗಳನ್ನು ತರಲಿ. ದಾಖಲೆಗಳನ್ನು ನೀಡಲು ನಾನೂ ಸಿದ್ಧ. ಅವರ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದು ನಿಖರವಾಗಿ ನನಗೆ ತಿಳಿದಿದೆ. ನನ್ನಲ್ಲಿರುವುದನ್ನು ನಾನು ತೆರೆದರೆ, ಜನರೇ ಅವರನ್ನು ಓಡಿಸುತ್ತಾರೆಂದು ಕಿಡಿಕಾರಿದರು.