ಸಿಎಂ ಸಿದ್ದರಾಮಯ್ಯ 
ರಾಜಕೀಯ

Pahalgam Terror Attack: ಭದ್ರತಾ ವೈಫಲ್ಯ ಪ್ರಶ್ನಿಸಬಾರದಾ? ಬಿಜೆಪಿ ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ!

ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ ಆರ್.ಎಸ್.ಎಸ್ ಕೇಂದ್ರ ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ. ಇದಕ್ಕೆ ನಾಚಿಕೆ ಆಗುವುದಿಲ್ಲವೇ?

ಬೆಳಗಾವಿ: ಕಾಶ್ಮೀರದಲ್ಲಿ ಅಮಾಯಕ ಭಾರತೀಯರನ್ನು, ಕರ್ನಾಟಕದ ಮೂವರು ಅಮಾಯಕರನ್ನು ರಾಜಾರೋಷವಾಗಿ ಗನ್‌ಗಳ ಸಮೇತ ಬಂದು ಅಮಾನುಷವಾಗಿ ಹತ್ಯೆ ಮಾಡಿ ಹೋದರಲ್ಲಾ ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ ಅಲ್ಲವಾ? ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲ ಆಗಿರುವುದನ್ನು ಭಾರತೀಯರು ಪ್ರಶ್ನಿಸಬಾರದಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಕಿಡಿಕಾರಿದರು.

ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ವಿರುದ್ಧ ಆಯೋಜಿಸಿದ್ದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ನಮ್ಮ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಿದ ದುಷ್ಟರಿಗೆ ದೇಶಪ್ರೇಮ ಇಲ್ಲವೇ? ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ ಆರ್.ಎಸ್.ಎಸ್ ಕೇಂದ್ರ ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ. ಇದಕ್ಕೆ ನಾಚಿಕೆ ಆಗುವುದಿಲ್ಲವೇ? ಯಾವತ್ತಾದರೂ ಆರ್.ಎಸ್.ಎಸ್ ಕಚೇರಿ ಮುಂದೆ ಹೋಗಿ ಪ್ರತಿಭಟಿಸಿದ್ದೀರ? ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತ ನಿರ್ಮಾಣದವರೆಗೂ ಬಿಜೆಪಿ, ಸಂಘ ಪರಿವಾರದ ಕೊಡುಗೆ ಏನಿದೆ? ನಾಚಿಕೆ ಇಲ್ಲದೆ ದೇಶಭಕ್ತಿ ಬಗ್ಗೆ ಮಾತಾಡ್ತೀರಾ. ಭಾರತೀಯ ಸಮಾಜವನ್ನು ಬಿರುಕು ಮೂಡಿಸಿದ್ದು ಬಿಟ್ಟರೆ ಇಷ್ಟು ವರ್ಷಗಳ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರಿಗೆ, ಇವರ ಹಿಂದೆ ನಿಂತಿರುವ ಮುಖೇಡಿ ನಾಯಕರಿಗೆ ನೇರವಾಗಿ ಎಚ್ಚರಿಕೆ ಕೊಡುತ್ತಿದ್ದೇನೆ. ನಾವು ಬಿಜೆಪಿ - ಆರ್.ಎಸ್.ಎಸ್ ನ ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನೆಲ್ಲಾ ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ, ನಮ್ಮ ಕಾರ್ಯಕರ್ತರಿಗೂ ಇದೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸುತ್ತಾ, ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಜನರ ನಡುವೆ ಬಿರುಕು ಮೂಡಿಸುತ್ತಾ ಜನದ್ರೋಹಿಯಾಗಿ ವರ್ತಿಸುತ್ತಿರುವುದು ಬಿಟ್ಟರೆ ಬೇರೆ ಏನು ಮಾಡಿದೆ? ಭಾರತೀಯರು ಬ್ರಿಟೀಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ನೀವು ಅಂದರೆ ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕ್ತಿದ್ರಿ? ಸ್ವಾತಂತ್ರ್ಯ ಹೋರಾಟಕ್ಕೆ ಏಕೆ ಬರಲಿಲ್ಲ ? ಏನ್ ಮಾಡ್ತಾ ಕೂತಿದ್ರಿ? ಎಂದು ಪ್ರಶ್ನಿಸಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಅತ್ಯಂತ ಶ್ರೀಮಂತರ ಮೇಲೆ ಶೇ. 32 ರಷ್ಟು ಟ್ಯಾಕ್ಸ್ ಇತ್ತು. ಮೋದಿ ಬಂದ ಮೇಲೆ ಅತ್ಯಂತ ಶ್ರೀಮಂತರ ಮೇಲಿನ ತೆರಿಗೆಯನ್ನು ಶೇ. 25 ಇಳಿಸಿದ್ದಾರೆ. ಬಡವರು, ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಹೆಚ್ಚಿಸಿದಿರಿ. ನಾಚಿಕೆ ಆಗುತ್ತಿಲ್ಲ ನಿಮಗೆ. ಬಡವರ, ಮಧ್ಯಮ ವರ್ಗದವರ ವಿರೋಧಿ ಬಿಜೆಪಿಯ ಆಡಳಿತವನ್ನು ಪ್ರಶ್ನಿಸಬಾರದಾ? ಭಾರತೀಯರನ್ನು ಇನ್ನೂ ಎಷ್ಟು ವರ್ಷ ಸುಳ್ಳು ಹೇಳಿ ಮರಳು ಮಾಡ್ತೀರಿ. ಸತ್ಯ ಹೇಳಿ ಎಂದು ಒತ್ತಾಯಿಸಿದರು.

ಹಾಲಿನ ದರ 4 ರೂ ಹೆಚ್ಚಿಸಿ, ಇಡೀ 4 ರೂಪಾಯಿಯನ್ನು ಪೂರ್ತಿಯಾಗಿ ರೈತರಿಗೆ, ಗೋಪಾಲಕರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೀವಿ. ಇದರಲ್ಲಿ ಒಂದು ರೂಪಾಯಿ ಕೂಡ ಸರ್ಕಾರಕ್ಕೆ ಬರಲ್ಲ. ನಾವು 4 ರೂ ಹೆಚ್ಚಿಸಿದರೂ ಹಾಲಿನ‌ ದರ ಇಡೀ ದೇಶದಲ್ಲಿ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಬಸ್ ದರ, ನೀರಿನ ದರ, ವಿದ್ಯುತ್ ದರ ಅಕ್ಕ ಪಕ್ಕದ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ನಿಮ್ಮ ಸುಳ್ಳು, ಅಪಪ್ರಚಾರ, ಬೆದರಿಕೆಗೆ ಈ ಸಿದ್ದರಾಮಯ್ಯ ಹೆದರುವವನಲ್ಲ. ನಿಮ್ಮನ್ನು ಮೆಟ್ಟಿ ನಿಲ್ತೀವಿ. ಕಾಂಗ್ರೆಸ್ ಪಕ್ಷಕ್ಕೆ ಆ ಶಕ್ತಿ ಇನ್ನೂ ಇದೆ ಎಂದರು.

ಅಕ್ಕಿ, ಎಣ್ಣೆ, ಚಿನ್ನ, ಬೆಳ್ಳಿ, ಗೊಬ್ಬರ, ಕಾಳು, ಬೇಳೆ, ಡೀಸೆಲ್, ಪೆಟ್ರೋಲ್, ಸಿಲಿಂಡರ್ ಎಲ್ಲದರ ಬೆಲೆ ಏರಿಸಿದ್ದೀರಿ. ಯಾವುದನ್ನು ಬಿಟ್ಟಿದ್ದೀರಿ ಹೇಳಿ? ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ನಿರಂತರವಾಗಿ ಏರಿಕೆ ಮಾಡುತ್ತಲೇ ಇರುವುದು ಭಾರತೀಯರಿಗೆ ಬಿಜೆಪಿ ಬಗೆಯುತ್ತಿರುವ ಮಹಾದ್ರೋಹ. ಬಿಜೆಪಿ ನಿರಂತರವಾಗಿ ಭಾರತೀಯರನ್ನು ಸುಳ್ಳುಗಳ ಸರಮಾಲೆಯಲ್ಲಿ ಮುಳುಗಿಸಿ, ಸಮಾಜದಲ್ಲಿ ಬಿರುಕು ಮೂಡಿಸಿ ಕಾಲ ಕಳೆಯುತ್ತಿದೆ. ನಿಮಗೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿದೆ. ನಾವು ಉತ್ತರ ಕೊಡ್ತೀವಿ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT