ಬೆಂಗಳೂರು: ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು, ಚುನಾವಣಾ ಆಯೋಗಕ್ಕೆ ಭೇಟಿ ನೀಡದೆ ತಮ್ಮ ಪಕ್ಷದವರಿಗೆ ಯಾವುದೇ ದಾಖಲೆಗಳನ್ನು ನೀಡದೆ ಕಳುಹಿಸಿ, ಹಿಟ್ ಅಂಡ್ ರನ್ ಪದ್ದತಿ ಪಾಲಿಸಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಭೇಟಿ ನೀಡದೆ, ತಪ್ಪಿಸಿಕೊಂಡು ತಮ್ಮ ಪಕ್ಷದವರಿಗೆ ಯಾವುದೇ ದಾಖಲೆಗಳನ್ನು ನೀಡದೆ ಕಳುಹಿಸಿ, ಹಿಟ್ ಅಂಡ್ ರನ್ ಪದ್ದತಿ ಪಾಲಿಸಿದ್ದಾರೆ. ಸಾರ್ವಜನಿಕವಾಗಿ ಇಲ್ಲ- ಸಲ್ಲದ ದೊಡ್ಡ ದೊಡ್ಡ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ. ಆದರೆ, ಸಾಕ್ಷಿಗಳನ್ನು ಕೇಳಿದರೆ ಮಾಯವಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈ ನಡುವೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಹುಲ್ ಗಾಂಧಿ ಗುರುವಾರ ಮತಗಳ್ಳತನದ ಆರೋಪ ಮಾಡಿ, ಬೆಂಗಳೂರಿನಲ್ಲಿ ಶುಕ್ರವಾಹ ಪ್ರತಿಭಟನೆ ನಡೆಸಿದ್ದಾರೆ. ಯಾಕೆ ಪ್ರತಿಭಟನೆ ನಡೆಸಿದ್ದಾರೆ ಎಂದು ಕೇಳಿದರೆ ಅವರಿಗೆ ಗೊತ್ತಿರಲ್ಲ. ರಾಜ್ಯ ಚುನಾವಣಾ ಆಯೋಗ ಬಂದು ಸ್ಪಷ್ಟನೆ ನೀಡಿ ಎಂದು ಕೇಳಿದೆ. ಫ್ರೀಡಂ ಪಾರ್ಕ್ನಿಂದ ಆಯೋಗದ ಕಚೇರಿಗೆ ನಡೆದು ಹೋದರೆ 5 ನಿಮಿಷ. ಆದರೆ, ಆಯೋಗದ ಕಚೇರಿಗೆ ಹೋಗಿಲ್ಲ. ಬೇರೆ ಯಾರನ್ನೊ ಕಳುಹಿಸಿದ್ದಾರೆ.
ಆರೋಪ ಮಾಡಿ ಇನ್ಯಾರನ್ನೋ ಉತ್ತರ ಕೊಡಿಸಲು ಕಳಿಸಿದರೆ, ನಿಮ್ಮ ಸುಳ್ಳು ಆರೋಪಕ್ಕೆ ಆಧಾರ ಇಲ್ಲ ಎಂದು ಅರ್ಥ. ಎಲ್ಲಾ ರಾಜ್ಯಗಳ ಚುನಾವಣಾ ಆಯೋಗ ಅಫಿಡವಿಟ್ ಕೇಳಿವೆ. ಈವರೆಗೂ ಅಫಿಡವಿಟ್ ಫೈಲ್ ಮಾಡಿಲ್ಲ. ರಾಹುಲ್ ಸ್ಥಿತಿ ಹೇಗೆಂದರೆ ಸರ್ಕಾರದಲ್ಲಿ ಇದ್ದಾಗ ಲೂಟಿಯ ಅಂಗಡಿ. ಚುನಾವಣೆಯಲ್ಲಿ ಮಾತ್ರ ಅವರಿಗೆ ಪ್ರೀತಿಯ ಅಂಗಡಿ ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಅಧಿಕಾರದಿಂದ ಜನರು ಕೆಳಗೆ ಹಾಕಿದ ಮೇಲೆ ಸುಳ್ಳಿನ ಅಂಗಡಿ ತೆಗೆಯುತ್ತಾರೆ. ಇವರ ಅಜ್ಜಿ ತುರ್ತು ಪರಿಸ್ಥಿತಿ ಹೇರಿದವರು. ಇವರು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಮನ ಬಂದಂತೆ ಮಾತನಾಡುತ್ತಿದ್ದಾರೆಂದು ಟೀಕಿಸಿದ್ದಾರೆ.