ಬೆಂಗಳೂರು: ಪ್ರಧಾನಮಂತ್ರಿ ಫ್ರಾಡ್ ಎಂಬ ಕಾಂಗ್ರೆಸ್‌ನ ನಸೀರ್ ಅಹ್ಮದ್ ಅವರ ಮಾತು ವಿಧಾನಪರಿಷತ್‌ನಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಬುಧವಾರ ತಡರಾತ್ರಿ ಕೌನ್ಸಿಲ್‌ನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸಿದರು.
ಬುಧವಾರ ತಡರಾತ್ರಿಯವರೆಗೂ ನಡೆದ ಚರ್ಚೆಯ ವೇಳೆ ನಸೀರ್ ಅಹ್ಮದ್ ಅವರು ಪ್ರಧಾನ ಮಂತ್ರಿ ಫ್ರಾಡ್’ ಎಂದು ಹೇಳಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು, ‘ನಸೀರ್ ಕ್ಷಮೆ ಕೇಳಬೇಕು’ ಎಂದು ಪಟ್ಟು ಹಿಡಿದರು. ಕಡತದಿಂದ ತೆಗೆದು ಹಾಕಿದ್ದೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ‘ಮತ್ತೊಮ್ಮೆ ಫ್ರಾಡ್ ಎಂದಿದ್ದಾರೆ. ಅವರು ಕ್ಷಮೆ ಕೇಳಬೇಕು. ಸದನದಿಂದ ಹೊರಗೆ ಹಾಕಬೇಕು.
ಅನಗತ್ಯವಾಗಿ ಪ್ರಧಾನಿ ಹೆಸರು ತಂದಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು. ಬಿಜಿಪಿ ಸದಸ್ಯರು ಸಭಾಪತಿಯವರ ಪೀಠದ ಮುಂದೆ ನಿಂತು ಧರಣಿ ನಡೆಸಿ, ‘ನಸೀರ್ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.
ದೇಶದ ಪ್ರಧಾನಿ ಬಗ್ಗೆ ಮಾತನಾಡುವುದು ಸರಿಯಲ್ಲ, ವಾಪಸ್ ತೆಗೆದುಕೊಳ್ಳಲು ಸದಸ್ಯರಿಗೆ ಹೇಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾನಾಯಕ ಬೋಸರಾಜು ಅವರಿಗೆ ಸೂಚಿಸಿದರು. ಎಲೆಕ್ಷನ್‌ನಲ್ಲಿ ಫ್ರಾಡ್ ಮಾಡಿ ಪ್ರಧಾನಮಂತ್ರಿಯಾಗಿದ್ದಾರೆ. ನೋವಿನಿಂದ ನಾನು ಹೇಳಿದ್ದೇನೆ. ವ್ಯಕ್ತಿಗತವಾಗಿ ಟೀಕೆ ಮಾಡಬೇಕೆಂದೇನೂ ಇಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಹೇಳಿದ್ದನ್ನು ವಾಪಸ್ ಪಡೆಯುತ್ತೇನೆ’ ಎಂದು ನಸೀರ್ ಅಹ್ಮದ್ ಹೇಳಿದರು.