ರಾಮನಗರ: ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ‘ಮಾನಸಪುತ್ರ’, ಶಾಸಕ ಎಚ್ ಎ ಇಕ್ಬಾಲ್ ಹುಸೇನ್ ಅವರು ಶನಿವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು, ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ. ಅವರು ಜನವರಿ 6 ರಂದು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯನ್ನು ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು. ಡಿಕೆಶಿಗೆ ಅವಕಾಶ ಸಿಗಬೇಕು. ಇದಕ್ಕೆ ಹೈಕಮಾಂಡ್ ಸ್ಪಂದಿಸುತ್ತಿದೆ. ಬಹುಶ: ಜನವರಿ 6ರಂದು ಸಿಎಂ ಸ್ಥಾನ ಸಿಗುವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದರು.
"ಜನವರಿ 6 ರಂದು ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಶೇ. 99 ರಷ್ಟು ಇದೆ" ಎಂದು ಡಿಕೆ ಶಿವಕುಮಾರ್ ಅವರ ಕಟ್ಟಾ ಬೆಂಬಲಿಗರಾದ ಹುಸೇನ್ ಹೇಳಿದರು.
ಆ ದಿನಾಂಕದ ಮಹತ್ವವೇನು ಎಂದು ಕೇಳಿದಾಗ, ಡಿಕೆ ಶಿವಕುಮಾರ್ ಅವರಿಗೆ ಜ.6 ಮತ್ತು ಜ. 9 ಅದೃಷ್ಟ ಸಂಖ್ಯೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ಡಿಕೆಶಿ ಅವರ ಹೋರಾಟಕ್ಕೆ, ಶ್ರಮಕ್ಕೆ ಪ್ರತಿಫಲ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.
ಇದೇ ವೇಳೆ ಸಿಎಂ ಬದಲಾವಣೆ ಇಲ್ಲ ಎಂದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಏನೇ ಹೇಳಿಕೊಳ್ಳಲಿ. ರಾಜ್ಯದ ಜನ ಹಾಗೂ ಈ ಭಾಗದ ಶಾಸಕರು ಡಿಕೆಶಿಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಡಿಕೆ ಶಿವಕುಮಾರ್ ಸಿಎಂ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಮೇಶ್ವರ ಸಿಎಂ ಆಗಲಿ
ಈ ಮಧ್ಯೆ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮತ್ತು ಬಿಜೆಪಿ ಸಂಸದ ವಿ. ಸೋಮಣ್ಣ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದಿದ್ದಾರೆ.
"ಅಧಿಕಾರ ಪಡೆಯುವುದು ಅದೃಷ್ಟ. ಪರಮೇಶ್ವರ ಅವರು ಗೃಹ ಸಚಿವರಾಗಿಯೇ ಉಳಿಯುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರನ್ನು ಮುಖ್ಯಮಂತ್ರಿಯಾಗಿ ನೋಡುವುದು ನಮ್ಮ ಆಸೆ. ನನಗಷ್ಟೇ ಅಲ್ಲ, ತುಮಕೂರಿನ ಜನರಿಗೆ ಕೂಡ ಅವರನ್ನು ಮುಖ್ಯಮಂತ್ರಿಯಾಗಿ ನೋಡುವ ಆಸೆ ಇದೆ" ಎಂದು ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋಮಣ್ಣ ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿ ಎಂದು ಪ್ರೇಕ್ಷಕರೊಬ್ಬರು ಕೇಳಿದಾಗ, "ಅದನ್ನು ಬಿಡಿ. ಅದು ಗೌಣ. ಶಿವಕುಮಾರ್ ಏನಾಗಲು ಬಯಸುತ್ತಾರೆ ಎಂಬುದು ಅವರ ಅದೃಷ್ಟವನ್ನು ಅವಲಂಬಿಸಿರುತ್ತದೆ ಎಂದು ಸೋಮಣ್ಣ ಹೇಳಿದರು.