ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಭಾರೀ ಸುದ್ದಿಯಾಗಿದ್ದು ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ. ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ತೀವ್ರ ಚರ್ಚೆ ಗಳು ನಡೆಯುತ್ತಿದೆ.
ವಿಪಕ್ಷ ನಾಯಕರು ರಾಜ್ಯ ಸರ್ಕಾರ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸರ್ಕಾರ ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸಮಾಡುತ್ತಿದೆ. ಫೆಬ್ರವರಿ, ಮಾರ್ಚ್ ತಿಂಗಳ ಹಣ ನೀಡಿದೇ 5 ಸಾವಿರ ಕೊಟಿ ಮೋಸ ಆಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ತೀವ್ರ ಆರೋಪ ಮಾಡಿದ್ದು, ಈ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಕಳೆದ ಬಜೆಟ್‌ನಲ್ಲಿ ಕೊಡಬೇಕಿದ್ದ 5 ಸಾವಿರ ಕೋಟಿ ಹಣ ಕೊಡದೇ ಉಳಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರ ಗ್ಯಾರಂಟಿಗಳ ಮೂಲಕ ಕೋಟಿ ಕೋಟಿ ಮೋಸ ಮಾಡುತ್ತಿದೆ. ಕಳೆದ ಬಜೆಟ್‌ನಲ್ಲಿ ಕೊಡಬೇಕಿದ್ದ 5 ಸಾವಿರ ಕೋಟಿ ಹಣ ಕೊಡದೇ ಉಳಿಸಿಕೊಂಡಿದ್ದಾರೆ. ಶಕ್ತಿ ಯೋಜನೆಯಲ್ಲಿಯೂ ಹಣ ಉಳಿಸಿಕೊಂಡಿದ್ದಾರೆ. ಸರ್ಕಾರ ಪಾಪರ್ ಆಗಿದ್ದು, ಸಂಬಳ ಕೊಡೋದಕ್ಕೂ ಹಣ ಇಲ್ಲ. ಕಾಂಗ್ರೆಸ್ ಮಾನ ಮರ್ಯಾದೆ ಹರಾಜು ಆಗಿದೆ. ಮತ್ತೆ ಸ್ಟಾಂಪ್ ಡ್ಯೂಟಿ ಹೆಚ್ಚಿಸುತ್ತಿದ್ದಾರೆ. ಇದು ತುಘಲಕ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.
ಸರ್ಕಾರ ದಿವಾಳಿ ಹಂತದಲ್ಲಿದೆ ಎಂದ ವಿಪಕ್ಷ
ಗೃಹ ಲಕ್ಷ್ಮಿ ಯೋಜನೆಯನ್ನು ಉಲ್ಲೇಖಿಸಿ, "ಸರ್ಕಾರ ದಿವಾಳಿ ಹಂತದಲ್ಲಿದೆ. ಹಣಕಾಸು ಇಲಾಖೆಗೂ ಬೇರೆ ಇಲಾಖೆಗಳಿಗೂ ಸಂಬಂಧವೇ ಇಲ್ಲದಂತೆ ವಾತಾವರಣ ಇದೆ. ಪಾರ್ಟಿಯ ಬಣ ರಾಜಕೀಯ ಸರ್ಕಾರದ ಇಲಾಖೆಗಳ ಮಧ್ಯೆ ಬಂದಿದೆ. ನಾವು ಸಿಎಂ ಸಿದ್ದರಾಮಯ್ಯ ಅವರಿಂದ ಉತ್ತರಕ್ಕೆ ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವಿಚಾರದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಸಿಎಂ ಸಿದ್ದರಾಮಯ್ಯ ಸರಳವಾದ ಉತ್ತರ ಕೊಡೋದಕ್ಕೆ ಹೊರಟಿದ್ದರು. ಆದರೆ ಇದನ್ನು ನಾವು ಇಲ್ಲಿಗೇ ಬಿಡುವವರಲ್ಲ. 5,000 ಕೋಟಿ ವ್ಯತ್ಯಾಸ ಸರಳ ವಿಷಯವಲ್ಲ. ಸರ್ಕಾರ ದಿವಾಳಿ ಹಂತದಲ್ಲಿದೆ ಎಂದರು.
ನ್ಯಾಯಾಂಗ ತನಿಖೆಗೆ ನೀಡಬೇಕು
ಅಲ್ಲದೇ ಪರಿಷತ್ ಸದಸ್ಯ ಸಿಟಿ ರವಿ ಕೂಡ, "ಗೃಹ ಲಕ್ಷ್ಮಿ ಯೋಜನೆಯಲ್ಲಿ ಸಚಿವರು ಒಪ್ಪಿಕೊಂಡಿದ್ದಾರೆ, ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿರುವುದನ್ನು ಸಹ ಒಪ್ಪಿಕೊಂಡಿದ್ದಾರೆ. ಬಿಜೆಪಿ ಈ ತಪ್ಪು ಮಾಹಿತಿಯನ್ನು ಬಹಿರಂಗಪಡಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಬಾಕಿ ಉಳಿಸಿಕೊಂಡಿರುವುದು. ಈಗ ಹೇಗೆ ಕೊಡುತ್ತಾರೆ ಎಂದು ನೋಡಬೇಕು. ಇದನ್ನು ಸುಮ್ಮನೆ ಬಿಡಬಾರದು, ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ವಿಪಕ್ಷದ ಆರೋಪಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು
ವಿಪಕ್ಷದ ಆರೋಪಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿ, "ನಾವು ಕೊಟ್ಟಂತಹ ವಚನವನ್ನು ನಮ್ಮ ಇಲಾಖೆ, ನಮ್ಮ ಸರ್ಕಾರ ಬದ್ಧತೆಯಿಂದ ನಡೆಸಿಕೊಂಡು ಬರುತ್ತಿದೆ. ಹಣಕಾಸು ಇಲಾಖೆಗೆ ನಾನು ಪ್ರತಿ ತಿಂಗಳೂ ಫೈಲ್ ಮೂವ್ ಮಾಡ್ತೀನಿ. ಹಣಕಾಸು ಇಲಾಖೆ ನನ್ನ ಫೈಲ್ ಕ್ಲಿಯರ್ ಮಾಡಿದ ತಕ್ಷಣ ಗೃಹ ಲಕ್ಷ್ಮಿಯರಿಗೆ ಹಣ ಹಾಕುತ್ತೇನೆ. ಇದುವರೆಗೆ 22 ಸಾವಿರ ಕೋಟಿ ರೂಪಾಯಿಗಳನ್ನು ಫಲಾನುಭವಿಗಳಿಗೆ ವರ್ಗಾವಣೆ ಮಾಡಿದ್ದೇವೆ ಎಂದರು.
ಫೆಬ್ರವರಿ ಮಾರ್ಚ್ ತಿಂಗಳಿಗೆ ಹಣಕಾಸು ಇಲಾಖೆಯಿಂದ 5,000 ಕೋಟಿ ಬಿಡುಗಡೆಯೇ ಆಗಿಲ್ಲ. ಬಿಡುಗಡೆ ಆಗದ ಹಣ ಎಲ್ಲಿ ಹೋಗುತ್ತದೆ? ಇದರ ಬಗ್ಗೆ ಜಾಸ್ತಿ ಮಾತಾನಾಡಬೇಡಿ, ಬಹಳ ಒಳ್ಳೆಯ ಯೋಜನೆ ಇದೆ. ಅವರು ಕೇಳ್ತಾರೆ ಅಂತ ನೀವು ಕೇಳಬೇಡಿ. ಇವತ್ತು ಪ್ರತಿಯೊಬ್ಬರಿಗೂ ಆರ್ ಟಿಐ ಇದೆ. ತಾವು ವಿದ್ಯಾವಂತರು, ನನ್ನ ಪ್ರಶ್ನೆ ಮಾಡ್ತಾ ಇದ್ದೀರಿ. ಅವರನ್ನು ಕೂಡ ಪ್ರಶ್ನೆ ಮಾಡಿ. ವಿಪಕ್ಷದವರು ಚೈಲ್ಡಿಸ್ ರೀತಿಯಲ್ಲಿ ಪ್ರಶ್ನೆ ಮಾಡಬೇಡಿ ಎಂದು ತಿರುಗೇಟು ನೀಡಿದರು.