ಬೆಂಗಳೂರು: ಹೈಕಮಾಂಡ್ ತೃಪ್ತಿಪಡಿಸಲು ಕಾಂಗ್ರೆಸ್ ಸರ್ಕಾರ ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗುರುವಾರ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈ ಕಮಾಂಡ್ ತೃಪ್ತಿಪಡಿಸಲು ರಾಜ್ಯ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ರಾಜ್ಯವು ಕಾಂಗ್ರೆಸ್ ಹೈಕಮಾಂಡ್'ಗೆ ಎಟಿಎಂ ಆಗಿ ಮಾರ್ಪಟ್ಟಿದೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಹಣವನ್ನು ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಸರಣಿ ಹಗರಣಗಳು ನಡೆದಿವೆ. ಹೈಕಮಾಂಡ್ ತೃಪ್ತಿ ಪಡಿಸಲು ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುವಂತಾಗಿದೆ. ಗುತ್ತಿಗೆದಾರರ ಸಂಘ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ಬಿಟ್ಟರೆ ರಾಜ್ಯದಲ್ಲಿ ಏನೂ ಅಭಿವೃದ್ಧಿ ಆಗ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅಭಿವೃದ್ಧಿ ನಿಂತಿದ್ದು, ಕಾಂಗ್ರೆಸ್ ನಾಯಕರು ರಾಜ್ಯದ ಖಜಾನೆಯನ್ನು ಖಾಲಿ ಮಾಡಿ, ಜನರ ಹಣವನ್ನು ಲೂಡಿ ಮಾಡುತ್ತಿದ್ದಾರೆ, ಆ ಹಣವನ್ನು ಕೇವಲ ಪಕ್ಷದ ಹೈ ಕಮಾಂಡ್‌ಗೆ ಕಳುಹಿಸುತ್ತಿದ್ದಾರೆಂದು ಆರೋಪಿಸಿದರು.
ಇದೇ ವೇಳೆ ಅಧಿವೇಶನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಾಪ ಮುಖ್ಯಮಂತ್ರಿಯವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಮುಖ್ಯಮಂತ್ರಿಗಳ ಮಾತಿನ ಧಾಟಿ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಔಟ್‌ಗೋಯಿಂಗ್ ಸಿಎಂರಿಂದ ಸದನದಲ್ಲಿ ಚರ್ಚೆಗೆ ಪರಿಹಾರ ಸಿಗುತ್ತದೆ ಎನ್ನುವ ಆಶಾಭಾವನೆ ಇರಲಿಲ್ಲ. ಮುಖ್ಯಮಂತ್ರಿಯಾಗಿ ಎಷ್ಟು ದಿನ ಕೂರುತ್ತೀರಿ ಎನ್ನುವುದು ಮುಖ್ಯವಲ್ಲ.
ಆ ಸ್ಥಾನದಲ್ಲಿ ಇದ್ದು ರಾಜ್ಯಕ್ಕೆ ಏನು ಕೆಲಸ ಮಾಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಸಿದ್ದರಾಮಯ್ಯನವರ ಕೊನೆಯ ಅಧಿವೇಶನದಲ್ಲಾದರೂ ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ನಡೆಯಬೇಕಿದೆ. ಕಳೆದ ಎರಡು ವರ್ಷ ಏನೂ ಮಾಡದೇ ಇರುವವರು ಇನ್ನೆರಡು ವಾರದಲ್ಲಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.