ಬೆಳಗಾವಿ: ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನದ ಕೊನೆಯ ದಿನ. ಸದನದಲ್ಲಿ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಅವರು ಮೊದಲು ಸದಸ್ಯರಿಗೆಲ್ಲ ಸುಗಮ ಕಲಾಪಕ್ಕೆ ಸಹಕಾರ ಕೊಟ್ಟದ್ದಕ್ಕೆ ಧನ್ಯವಾದ ಹೇಳಿದರು. ಈ ವೇಳೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡಪಾಟೀಲ ಯತ್ನಾಳ್ ಸಿಎಂ ಕುರ್ಚಿ ಕಾಳಗದ ಬಗ್ಗೆ ಪ್ರಸ್ತಾಪಿಸಿದಾಗ ಮತ್ತೆ ಆ ವಿಷಯ ಚರ್ಚೆ ನಡೆಯಿತು, ಸಿಎಂ ತಮ್ಮ ಎಂದಿನ ಧಾಟಿಯಲ್ಲಿಯೇ ಉತ್ತರಿಸಿದರು.
ರಾಜಕೀಯ ನಿಶ್ಯಕ್ತಿ ಇಲ್ಲವೇ ಇಲ್ಲ-ಸಿಎಂ
ನಿಮ್ಮ ಮುಖದಲ್ಲಿ ನಿನ್ನೆ ನಿಶ್ಯಕ್ತಿ ಎದ್ದು ಕಾಣ್ತಿತ್ತು ಎಂದು ಬಿಜೆಪಿಯ ನಾಯಕರು ಸಿಎಂಗೆ ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ. ನನಗೆ ರಾಜಕೀಯ ನಿಶಕ್ತಿ ಯಾವಾಗಲೂ ಇಲ್ಲ. ರಾಜಕೀಯವನ್ನು ಅಷ್ಟೊಂದು ತಲೆ ಕೆಡೆಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಜನರು ಆಶೀರ್ವಾದ ಮಾಡಿದ್ರೆ ಮಾತ್ರ ಅಧಿಕಾರಕ್ಕೆ ಬರೋದು. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭುಗಳು ತಾನೇ ರಾಜಕೀಯ ಶಕ್ತಿ ನಿರ್ಧಾರ ಮಾಡೋದು ಎಂದು ಹೇಳಿದರು.
ರಾಜಕೀಯ ನಿಶ್ಯಕ್ತಿ ಅನ್ನೋದೇ ಇಲ್ಲವೇ ಇಲ್ಲ, ಮುಂದೆಯೂ ಇಲ್ಲ, ಇವಾಗ್ಲೂ ಕೂಡ ಇಲ್ಲ. ನೀವು ಏನಾದರೂ ಹಾಗೇ ಅಂದುಕೊಂಡರೆ ಅದು ತಪ್ಪು ಮಾಹಿತಿ ಎಂದ ಬಿಜೆಪಿ ನಾಯಕರಿಗೆ ಸಿಎಂ ಹೇಳಿದರು. ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯಪ್ರವೇಶಕ್ಕೂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
'5 ವರ್ಷ ಸಿದ್ದರಾಮಯ್ಯನವರೇ ಸಿಎಂ'
ಯತ್ನಾಳ್ ನಿಮಗೆ ಬಹಳಷ್ಟು ಸಂಶಯಗಳು ಇದ್ದವು. ಅದಕ್ಕೆ ನಿಮ್ಮನ್ನು ಬಿಜೆಪಿ ಪಕ್ಷದಿಂದ ಹೊರಗೆ ಹಾಕಿದ್ರು ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ನಿಮ್ಮನ್ನು ಕುತಂತ್ರದಿಂದ ಹೊರಗೆ ಹಾಕಿಲ್ಲವಾ? ಎಂದು ಯತ್ನಾಳ್ ಮರುಪ್ರಶ್ನೆ ಮಾಡಿದರು. ಬಳಿಕ ಯತ್ನಾಳ್, ಇವಾಗ ಖಚಿತ ಆಯ್ತು ಸಿದ್ದರಾಮಯ್ಯನೇ ಐದು ವರ್ಷ ಪೂರ್ಣಗೊಳಿಸ್ತಾರೆ ಎಂದಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಯತ್ನಾಳ್ ನಡುವೆ ಮಾತಿನ ಸಮರಸ ನಡೆಯಿತು.
ಎರಡೂವರೆ ವರ್ಷ ಒಪ್ಪಂದ ಆಗಿಲ್ಲ
ಹೈಕಮಾಂಡ್ ಮುಂದೆ 2023ರಲ್ಲಿ ಯಾವುದೇ ಒಪ್ಪಂದವಾಗಿಲ್ಲ. 5 ವರ್ಷಕ್ಕೆ ಸಿಎಂ ಆಗಿ ನನ್ನನ್ನೇ ಆಯ್ಕೆ ಮಾಡಿದ್ದಾರೆ. ಎರಡೂವರೆ ವರ್ಷ ಎರಡೂವರೆ ವರ್ಷ ಎಂದು ನನ್ನ ಮತ್ತು ಡಿಸಿಎಂ ಮಧ್ಯೆ ಯಾವುದೇ ಒಪ್ಪಂದವಾಗಿಲ್ಲ ಎಂದು ಇಂದು ಬೆಳಗಾವಿ ಸದನದಲ್ಲಿ ಮೂರು ಬಾರಿ ಸಿಎಂ ಹೇಳುವ ಮೂಲಕ ವಿಧಾನಸಭೆಯ ಕಡತಕ್ಕೆ ದಾಖಲೆಗೆ ಹೋಗುವ ರೀತಿಯಲ್ಲಿ ಸಿಎಂ ಮಾತನಾಡಿದ್ದು ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಕದನಕ್ಕೆ ಇಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ತೆರೆ ಎಳೆದರೇ ಎಂಬ ಮಾತುಗಳು ಕೇಳಿಬರುತ್ತಿದೆ.
ಸಿಎಂ ಸಿದ್ದರಾಮಯ್ಯ - ಯತ್ನಾಳ್ ಜುಗಲ್ ಬಂದಿ
ರಾಜಕೀಯವಾಗಿ ನಿಶ್ಯಕ್ತಿ ಅನ್ನೋ ಪದವೇ ನನ್ನಲ್ಲಿ ಇಲ್ಲ. ಯಾವಾಗಲೂ ಇಲ್ಲ, ಮುಂದೇನೂ ಇಲ್ಲ, ಈಗಲೂ ಇಲ್ಲ ಎಂಸು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಸಿಎಂ ಕಾಲೆಳೆದ ಯತ್ನಾಳ್, ನೀವೇ ಐದು ವರ್ಷ ಪೂರ್ತಿ ಮಾಡ್ತೀರೋ? ಅಥವಾ ಇವತ್ತೇ ಧನ್ಯವಾದ, ವಿದಾಯ ಹೇಳ್ತೀರೋ..? ಎಲ್ಲರಿಗೂ ಧನ್ಯವಾದ ಹೇಳ್ತೀರೋದು ನೋಡ್ತಿದ್ರೆ ನಮಗೆ ಸಂಶಯ ಬರುತ್ತಿದೆ ಎಂದರು.
ಯತ್ನಾಳ್ ಗೆ ಏನೇನೋ ಸಂಶಯಗಳಿವೆ...ಅವರಿಗೆ ಅವರ ಪಕ್ಷದಿಂದ ಅದಕ್ಕೇ ತೆಗೆದುಹಾಕಿಬಿಟ್ರು ಎಂದು ಸಿಎಂ ಹೇಳಿದರು. ಅದಕ್ಕೆ ಯತ್ನಾಳ್ ನನಗೂ ಹೊರ ಹಾಕಿದ್ದಾರೆ, ನಿಮಗೂ ಹೊರ ಹಾಕಿದ್ದಾರೆ ಹೊರ ಹಾಕಿದವರಿಗೆ ಅನ್ಯಾಯ ಆಗಲ್ಲ, ನಿಮ್ಮನ್ನು ಕುತಂತ್ರದಿಂದ ಹೊರ ಹಾಕಿದ್ರು, ಈಗ ಸಿಎಂ ಆಗಲಿಲ್ವಾ, ರಾಜಕೀಯದಲ್ಲಿ ಅದು ಸಾಮಾನ್ಯ ಎಂದರು.
ನಾನು ಅನ್ಯಾಯ ಆಯ್ತು ಅಂತ ಹೇಳಲ್ಲ, ಪಕ್ಷದಿಂದ ಹೊರ ಹಾಕಿದ್ದು ಸತ್ಯ ಅಲ್ಲ, ರಾಜಕೀಯದಲ್ಲಿ ಅವೆಲ್ಲಾ ಇರ್ತಾವೆ, ಆದ್ರೆ ಸಂಶಯ ಇಟ್ಕೋಬೇಡಿ ಎಂದರು ಸಿಎಂ.
ಈಗ ಕ್ಲಿಯರ್ ಆಯ್ತು, ಸಿಎಂ ಸಿದ್ದರಾಮಯ್ಯ ಐದು ವರ್ಷ ಪೂರ್ತಿ ಮುಗಿಸ್ತಾರೆ ಅಂತ ಸಂದೇಶ ಕೊಟ್ಟಂತಾಯ್ತು ಎಂದರು,
ಇವಾಗ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯ ವಾಗಿಯೂ ಶಕ್ತಿ ಶಕ್ತಿ ಬಂದಿದೇ ತಾನೇ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕೇಳಿದ್ದಾರೆ. ನಿಮ್ಮ ಕಳೆ ನೋಡಿದ್ರೆ ಅನಿಸುತ್ತಿದೆ, ಮೊನ್ನೆಯಲ್ಲ ಸಪ್ಪಗೆ ಇದ್ರಿ. ಇವಾಗ ರಾಜಕೀಯ ಕಳೆ ಬಂದು ಶಕ್ತಿ ಬಂದಿದೆ ಎಂದು ಅಶೋಕ್ ಹೇಳಿದರು.