ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮಾತ್ರವಲ್ಲ, ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ನನಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಹೇಳಿದರು.
ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ರಾಜ್ಯ ಬಿಜೆಪಿ ಅಧ್ಯಕ್ಷನಾಗುವ ಸಾಮರ್ಥ್ಯವಿದೆ. ಅಷ್ಟೇ ಅಲ್ಲ, ಕರ್ನಾಟಕದ ಮುಖ್ಯಮಂತ್ರಿಯಾಗುವ ಸಾಮರ್ಥ್ಯವೂ ಇದೆ. ಬಿಜೆಪಿಯನ್ನು ತಳಮಟ್ಟದಿಂದ ಬಲಪಡಿಸುವುದು ಮತ್ತು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಹೇಳಿದರು.
ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕವನ್ನ ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲದೆ, ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಇದೇ ವಿಚಾರವಾಗಿ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. ಅಲ್ಲದೆ ಮತ್ತೆ ದೆಹಲಿಗೆ ಹೋಗುತ್ತಿರುವುದಾಗಿಯೂ ತಿಳಿಸಿದರು.
ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರ ಗೃಹ ಪ್ರವೇಶವಿದೆ. ಅದಕ್ಕೆ ದೆಹಲಿಗೆ ಹೋಗುತ್ತಿದ್ದೇವೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಲಿದ್ದೇವೆ. ನಮಗೆ ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಲೇ ಇರುತ್ತೇವೆ. ನಮ್ಮ ಹೋರಾಟ ಪಕ್ಷದ ವಿರುದ್ಧವಲ್ಲ, ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರದ ವಿರುದ್ಧ. ಬಿಜೆಪಿಯ ಕ್ಲೀನ್ ಇಮೇಜ್‌ನಿಂದಾಗಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ಕೇಜ್ರಿವಾಲ್ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರು. ಅದುವೇ ಅವರ ಸೋಲಿಗೆ ಕಾರಣವಾಯ್ತು ಎಂದು ಹೇಳಿದರು.
ಪಕ್ಷದಲ್ಲಿ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಶ್ರೀರಾಮುಲು ಅವರು ರಾಜ್ಯ ಪ್ರವಾಸ ಮಾಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಇದು ಒಳ್ಳೆಯ ನಿರ್ಧಾರ. ಅದನ್ನು ಬೆಂಬಲಿಸುತ್ತೇನೆಂದು ಹೇಳಿದರು.
ಇತ್ತೀಚಿನ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಏನೂ ಅವಮಾನ ಆಗಿಲ್ಲ. ನಾವು ಇನ್ನೂ ಗಟ್ಟಿಯಾಗಿದ್ದೇವೆ. ನಾವು ವಿಜಯದ ಸಂಕೇತ ಇಟ್ಟುಕೊಂಡು ಬಂದಿದ್ದು, ವರಿಷ್ಠರು ಏನು ಹೇಳಬೇಕೋ ಹೇಳಿದ್ದಾರೆ. ಕೇಂದ್ರ ಬಿಜೆಪಿ ನಾಯಕರು ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ನಾವು ಅಲ್ಲಿ ಯಾರನ್ನು ಭೇಟಿಯಾದೆವು ಎಂಬುದನ್ನು ಗುಟ್ಟಾಗಿ ಇಡುವಂತೆ ಹೇಳಿದ್ದಾರೆಂದು ಹೇಳಿದರು.