ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ದೂರು ಹಿನ್ನೆಲೆಯಲ್ಲಿ ರದ್ದಾಗಿದ್ದ ದಲಿತ ಸಮಾವೇಶ ಮರುಜೀವ ಪಡೆದುಕೊಂಡಿದೆ. ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಎಸ್‌ಸಿ/ಎಸ್‌ಟಿ ಸಮುದಾಯಗಳ 'ಸಮಾವೇಶ' ನಡೆಸಲು ಒಪ್ಪಿಗೆ ಕೋರಿದ್ದು, ಇದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿದುಬಂದಿದೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಸಮಾವೇಶ ನಡೆಸಿದರೆ ಪಕ್ಷಕ್ಕಾಗುವ ಲಾಭವನ್ನು ಮನವರಿಕೆ ಮಾಡಿಕೊಟ್ಟಿದ್ದು, ಇದಕ್ಕೆ ಖರ್ಗೆಯವರು ಒಪ್ಪಿಗೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಮಾತುಕತೆ ವೇಳೆ ಖರ್ಗೆಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಮಾವೇಶಕ್ಕೆ ಆಹ್ವಾನಿಸುವಂತೆ ಪರಮೇಶ್ವರ ಅವರಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಖರ್ಗೆ ಅವರ ಸೂಚನೆ ಹಾಗೂ ಅಭಿಪ್ರಾಯಗಳನ್ನು ಪರಮೇಶ್ವರ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರೊಂದಿಗೆ ಹಂಚಿಕೊಂಡಿದ್ದು, ಸೂಚನೆಗಳ ಅನುಸಾರದೊಂದಿಗೆ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಈಗಾಗಲೇ ರಾಷ್ಟ್ರ ರಾಜಧಾನಿ ದೆಹಗಲಿಯಲ್ಲಿರುವ ಸತೀಶ್ ಜಾರಕಿಹೊಳಿಯವರು, ಶುಕ್ರವಾರ ರಾಹುಲ್ ಗಾಂಧಿ ಅವರ ಆಪ್ತ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಜಾರಕಿಹೊಳಿಯವರು, ಅವಕಾಶ ಮತ್ತು ಅವಶ್ಯಕತೆ ಬಿದ್ದಾಗ ದಲಿತ ಸಮಾವೇಶ ನಡೆಯುತ್ತದೆ. ದಲಿತ ಸಮಾವೇಶದ ಹೆಡ್ ಜಿ ಪರಮೇಶ್ವರ್, ಸಮಾವೇಶ ಪರಮೇಶ್ವರ್ ನೇತೃತ್ವದಲ್ಲಿ ನಡೆಯಲಿದೆ. ದಲಿತ ಸಮಾವೇಶ ಕುರಿತು ಪರಮೇಶ್ವರ್ ಬಳಿ ಕೇಳಿ ಅವರೇ ಅದರ ಹೆಡ್. ಅದರ ರೂಪುರೇಷೆ ಕುರಿತು ಪರಮೇಶ್ವರ್ ಬಳಿ ಕೇಳಿ ಎಂದು ಹೇಳಿದರು.
ಏತನ್ಮಧ್ಯೆ ಸಚಿವ ರಾಜಣ್ಣ ಅವರು ಕೂಡ ದೆಹಲಿಗೆ ತರೆಳಲಿದ್ದು, ಪರಮೇಶ್ವರ್ ಅವರು ಪ್ರತ್ಯೇಕವಾಗಿ ಮತ್ತೆ ದೆಹಲಿಗೆ ತರೆಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರ ಎರಡೂವರೆ ವರ್ಷಗಳ ಅಧಿಕಾರಾವಧಿಯ ನಂತರ ಮುಖ್ಯಮಂತ್ರಿ ಹುದ್ದೆಗೇರಲು ಡಿಕೆ.ಶಿವಕುಮಾರ್ ಅವರು ಸಜ್ಜಾಗಿದ್ದು, ಈ ನಡುವಲ್ಲೇ ಸಿಎಂ ಕುರ್ಚಿಯಿಂದ ಡಿಕೆಶಿಯನ್ನು ದೂರ ಇಡಲು ಸತೀಶ್ ಜಾರಕಿಹೊಳಿ ಅ್ಯಂಡ್ ಟೀಮ್ ನಿರಂತರವಾಗಿ ಶ್ರಮ ವಹಿಸುತ್ತಿದೆ. ಹೀಗಾಗಿಯೇ ದಲಿತ ಸಮಾವೇಶ, ದಲಿತ ಸಿಎಂ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.
ಈ ಹಿಂದೆ ದಲಿತ ನಾಯಕರು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶಕ್ಕೆ ಪ್ಲಾನ್ ಮಾಡಿದ್ದರು. ಸಮಾವೇಶದ ಮೂಲಕ ದಲಿತ ನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದರು. ಇದಲ್ಲದೆ, ಈ ನಾಯಕರ ಪರವಾಗಿರುವ ಸಿದ್ದರಾಮಯ್ಯ ಅವರು, ಎಸ್‌ಸಿ/ಎಸ್‌ಟಿ ಶಾಸಕರ ಸಭೆ ನಡೆಸಿ ಅವರ ಬೆಂಬಲವನ್ನು ಪಡೆಯುವಂತೆ ಪರಮೇಶ್ವರ ಅವರಿಗೆ ಸೂಚಿಸಿದ್ದರು. ಆದರೆ, ಡಿಕೆ.ಶಿವಕುಮಾರ್ ದೂರು ಹಿನ್ನೆಲೆ ಪಕ್ಷದ ಹೈಕಮಾಂಡ್, ವಿಶೇಷವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಹೈಕಮಾಂಡ್ ನಿರ್ಧಾರದಿಂದ ಬೇಸತ್ತಿರುವ ಎಸ್‌ಸಿ/ಎಸ್‌ಟಿ ಸಚಿವರು, ದಲಿತ ಮುಖ್ಯಮಂತ್ರಿಗಾಗಿ ಸಮುದಾಯಗಳು ಧ್ವನಿ ಎತ್ತುವುದನ್ನು ಖಚಿತಪಡಿಸಿಕೊಳ್ಳಲು ಹೈಕಮಾಂಡ್ ಮನವೊಲಿಸಿ ಇದೀಗ ಎಸ್‌ಸಿ/ಎಸ್‌ಟಿ ಸಮಾವೇಶಕ್ಕೆ ಮರುಜೀವ ನೀಡಲು ಕಸರತ್ತು ನಡೆಸುತ್ತಿದ್ದಾರೆ.