ಬಿಜೆಪಿ ಸಭೆ 
ರಾಜಕೀಯ

ನ್ಯಾಯಾಲಯದ ಕಣ್ಣಿಗೆ ಮಣ್ಣೆರೆಚಿದ್ದೇವೆಂದು ಬೀಗಬೇಡಿ, ಜನತಾ ನ್ಯಾಯಾಲಯದಲ್ಲಿ ಸೋಲುವುದ ಮರೆಯಬೇಡಿ: ಸಿದ್ದರಾಮಯ್ಯಗೆ BJP

ಮೂಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆಯು ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ ಇರಲಿಲ್ಲ.

ಬೆಂಗಳೂರು: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ ಇತರ ನಾಲ್ವರು ಆರೋಪಿಗಳಿಗೆ ಕ್ಲೀನ್‌ ಚಿಟ್ ನೀಡಿದ್ದು, ಈ ನಡುವೆ ತನಿಖೆಯಲ್ಲಿ ಪಕ್ಷಪಾತ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಮೂಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆಯು ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ ಇರಲಿಲ್ಲ. ಮೂಡಾ ಹಗರಣದಲ್ಲಿ ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಕಾಂಗ್ರೆಸ್ ಶಾಸಕರು ಆರೋಪಿ ಸಿದ್ದರಾಮಯ್ಯ ಹಾಗು ಅವರ ಧರ್ಮ ಪತ್ನಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಲೋಕಾಯುಕ್ತ ಪೊಲೀಸರೂ ಸ್ವಲ್ಪ ತಡವಾಗಿ 'ಬಿ ರಿಪೋರ್ಟ್' ರೂಪದಲ್ಲಿ ನೀಡಿದ್ದಾರೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದು ಹೇಳಿದ್ದಾರೆ.

ಒಂದೇ ಒಂದು ದಿನ ನೆಪಮಾತ್ರಕ್ಕೆ ಆರೋಪಿ ಸಿಎಂ ಸಿದ್ದರಾಮಯ್ಯ ಹಾಗು ಅವರ ಪತ್ನಿ ಅವರನ್ನು ವಿಚಾರಣೆ ನಡೆಸಿ ಕ್ಲೀನ್ ಚಿಟ್ ನೀಡಿರುವುದು ರಾಜ್ಯ ಕಂಡ 'ಐತಿಹಾಸಿಕ ದುರಂತ'. ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ 'ನ್ಯಾಯ' ಮಣ್ಣುಪಾಲಾಗಿದೆ. ಸಮರ್ಪಕ ತನಿಖೆಯನ್ನೇ ನಡೆಸದೆ ಕ್ಲೀನ್ ಚಿಟ್ ನೀಡಿ 'ನ್ಯಾಯದ ಸಮಾಧಿ' ಮಾಡಿದೆ ಈ ದುಷ್ಟ ಕಾಂಗ್ರೆಸ್ ಸರ್ಕಾರ. ಕೋರ್ಟಿಗೆ ಸಂಪೂರ್ಣ ಸಾಕ್ಷ್ಯ ಒದಗಿಸದೆ ಪ್ರಕರಣವನ್ನ ಮುಚ್ಚಿ ಹಾಕಿ ಸತ್ಯದ ಸಮಾಧಿ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯನವರ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ. ಇಂದಲ್ಲ ನಾಳೆ, ಉಪ್ಪು ತಿಂದ ಸಿದ್ದರಾಮಯ್ಯನವರು ನೀರು ಕುಡಿಯಲೇಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರು ಮಾತನಾಡಿ, ಮೂಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಳ್ಳುವ ಮುನ್ನವೇ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿಗೆ ಕ್ಲೀನ್ ಚಿಟ್ ನೀಡಿರುವ ಕಾಂಗ್ರೆಸ್ ಸರ್ಕಾರ, ಈಗ ತನಿಖಾ ಸಂಸ್ಥೆಗಳ ಮೂಲಕ ಅಧಿಕೃತವಾಗಿ ಅದನ್ನು ದೃಢಪಡಿಸಲು ಪ್ರಯತ್ನಿಸುತ್ತಿದೆ. ಇದು ಸರ್ಕಾರದ ನಿರ್ಧಾರಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ನಿರ್ಧಾರದ ಪ್ರಾಮಾಣಿಕತೆಯ ಬಗ್ಗೆ ಜನಮತದಲ್ಲಿ ಅನುಮಾನ ಮೂಡಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸದೇ, ಕೇವಲ ಒಂದು ದಿನದ ವಿಚಾರಣೆಯ ನಂತರ ಕೋರ್ಟ್ ಆದೇಶದ ನಿರೀಕ್ಷೆ ಇಲ್ಲದೆ ನೀಡಲಾದ ನಿರ್ಧಾರ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಪ್ರಕರಣವು ಗಂಭೀರವಾಗಿದ್ದರೂ, ಮಾನ್ಯ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿಯನ್ನು ಕೇವಲ ಒಂದು ದಿನ ಮಾತ್ರ ವಿಚಾರಣೆ ಮಾಡಿ ತಕ್ಷಣವೇ ಕ್ಲೀನ್ ಚಿಟ್ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ. ಸರ್ಕಾರದ ಹಸ್ತಕ್ಷೇಪದಿಂದ ಕೂಡಿದ ಈ ನಿರ್ಧಾರ ನ್ಯಾಯವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ.

ಮುಖ್ಯ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸುವ ಬದಲು ‘ಬಿ ರಿಪೋರ್ಟ್’ ಸಲ್ಲಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಪ್ರಾಮಾಣಿಕತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರದ ಹಸ್ತಕ್ಷೇಪದಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಲೋಪಗೊಂಡಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಸತ್ಯವನ್ನು ಯಾವತ್ತೂ ಸಂಪೂರ್ಣವಾಗಿ ಮರೆಮಾಚಲು ಸಾಧ್ಯವಿಲ್ಲ. ಇದು ನ್ಯಾಯಾಂಗ ಪ್ರಕ್ರಿಯೆಗೆ ಹಸ್ತಕ್ಷೇಪ ಮಾಡುವ ಪ್ರಯತ್ನವೆಂದೇ ನಾಡಿನ ಜನತೆ ಭಾವಿಸುತ್ತಿದ್ದಾರೆ. ಈ ಪ್ರಕರಣವನ್ನು ಸಮಗ್ರ ತನಿಖೆ ಮಾಡುವ ಮೂಲಕ ಸತ್ಯ ಅನಾವರಣಗೊಳ್ಳಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ. ನ್ಯಾಯ ಪ್ರಕ್ರಿಯೆ ವಿಳಂಬವಾಗಬಹುದು, ಆದರೆ ನಿರಾಕರಿಸಲಾಗದು. ಪ್ರಾಮಾಣಿಕ ತನಿಖೆಯ ಮೂಲಕ ಸತ್ಯ ಬಯಲಿಗೆ ಬರಬೇಕಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಲೋಕಾಯುಕ್ತ ಮುಖ್ಯಮಂತ್ರಿಗಳಿಗೆ ನೀಡಿರುವ ಕ್ಲೀನ್ ಚಿಟ್ ನಿರೀಕ್ಷಿತವೇ ಆಗಿತ್ತು. ತಾವೇ ನೇಮಿಸಲ್ಪಡುವ ಅಧಿಕಾರಿಗಳಿಂದಲೇ ನಡೆಸಲ್ಪಡುವ ತನಿಖೆಯಲ್ಲಿ ಮುಖ್ಯಮಂತ್ರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವೇ? ಎಂದು ಹೇಳಿದ್ದಾರೆ.

ನಾವು ಮೊದಲಿನಿಂದಲೂ ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿದ್ದೆವು, ಸಿಬಿಐ ತನಿಖೆಯಿಂದ ಮಾತ್ರ ಸಾವಿರಾರು ನಿವೇಶನಗಳು ಲೂಟಿಯಾಗಿರುವ ಮುಡಾ ಹಗರಣದಲ್ಲಿ ನ್ಯಾಯ ಸಿಗಲು ಸಾಧ್ಯ.

ಆದರೆ ಸಿದ್ದರಾಮಯ್ಯನವರ 14 ನಿವೇಶನಗಳು, ಲೂಟಿಯಾಗಿರುವ ಸಾವಿರಾರು ನಿವೇಶನಗಳನ್ನು ಹಾಗೂ ಲೂಟಿ ಮಾಡಿದ ಭ್ರಷ್ಟ ಅಧಿಕಾರಿಗಳು ಹಾಗೂ ಪ್ರಭಾವಿಗಳನ್ನು ರಕ್ಷಿಸುತ್ತಿದೆ. ರಾಜ್ಯ ಕಂಡು ಕೇಳರಿಯದ ಬಹುದೊಡ್ಡ ಭ್ರಷ್ಟ ಹಗರಣದ ಪಾರದರ್ಶಕ ತನಿಖೆ ನಡೆಯಬೇಕೆಂದರೆ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರದಿಂದ ಅಂತರ ಕಾಯ್ದುಕೊಂಡ ತನಿಖಾ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂಬುದು ನ್ಯಾಯ ನಿರೀಕ್ಷಿಸುವ ಪ್ರತಿಯೊಬ್ಬರೂ ಒಪ್ಪುವ ಮಾತು. ಈಗಲೂ ಬಿಜೆಪಿ ತನ್ನ ನಿಲುವನ್ನು ಬದಲಿಸುವ ಪ್ರಶ್ನೆಯೇ ಇಲ್ಲ, ಮುಡಾ ಹಗರಣದ ತನಿಖೆ ಸಿಬಿಐನಿಂದ ನಡೆಯಬೇಕೆಂಬುದೇ ನಮ್ಮ ಒತ್ತಾಯವಾಗಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ A1 ಆರೋಪಿ ಸ್ಥಾನದಲ್ಲಿ ಮುಖ್ಯಮಂತ್ರಿಯೊಬ್ಬರು ತನಿಖೆ ಎದುರಿಸಿದ ಪ್ರಥಮ ಪ್ರಕರಣ ಇದಾಗಿದೆ,ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಲೋಕಾಯುಕ್ತ ನೀಡಿರುವ ಕ್ಲೀನ್ ಚಿಟ್ ದುರದೃಷ್ಟಕರ. ಶುದ್ಧ ವ್ಯಕ್ತಿತ್ವ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ನೈತಿಕವಾಗಿ ಸೋತು ಬಹುದಿನಗಳಾಗಿವೆ, ಭಂಡತನ ಅವರ ಬಂಡವಾಳವಾಗಿದೆ. ಈ ನೆಲದ ಕಾನೂನಿನ ಮೇಲೆ ನಮಗೆ ವಿಶ್ವಾಸವಿದೆ,ಅಕ್ರಮ, ಭ್ರಷ್ಟಾಚಾರಗಳಿಗೆ ಕುಣಿಕೆ ಬಿಗಿಯುವುದು ಖಚಿತ,ಸತ್ಯ ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

ಅವರು ಹೇಳಿದಂತೆ ತನಿಖೆ ಮಾಡಬೇಕಾ? ಬಿಜೆಪಿ ವಿರುದ್ಧ ಪೊನ್ನಣ್ಣ ಕಿಡಿ

ಈ ನಡುವೆ ಬಿಜೆಪಿ ಆರೋಪಕ್ಕೆ ಸಿಎಂ ಕಾನೂನು ಸಲಹೆಗಾರ ಎಎಸ್‌ ಪೊನ್ನಣ್ಣ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತರು ಕ್ಲೀನ್ ಚಿಟ್ ನೀಡಿರುವುದರಿಂದ ಪ್ರಕರಣ ರಾಜಕೀಯ ಪ್ರೇರಿತ ಎಂದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಇದು ಸಂಪೂರ್ಣವಾಗಿ ರಾಜಕೀಯಕ್ಕೆ ಬಳಸಿದ ಪ್ರಕರಣವಾಗಿದೆ. ತನಿಖೆ ಮಾಡಿರುವುದು ಲೋಕಾಯುಕ್ತ ಸಂಸ್ಥೆ. ಪಾರದರ್ಶಕವಾದ ತನಿಖೆ ಆಗಿದೆ. ಸ್ವತಂತ್ರವಾದ ತನಿಖೆ ನಡೆದಿದೆ ಎಂದು ಈಗಾಗಲೇ ನ್ಯಾಯಾಲಯವೂ ಹೇಳಿದೆ. ಇದರಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆ ಇಲ್ಲ ಎಂದು ಕೋರ್ಟ್ ಹೇಳಿದೆ. ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಿಕೊಂಡು ಹೋಗಲಿ. ರಾಜಕೀಯವಾಗಿ ಆರೋಪಗಳಿಗೆ ಉತ್ತರ ಕೊಡಲು ಆಗುವುದಿಲ್ಲ.

ಸಂವಿಧಾನದ ಮೇಲೆ ಕಾನೂನಿನ ಮೇಲೆ ನಂಬಿಕೆ ಇಲ್ಲದವರು ಆರೋಪ ಮಾಡುತ್ತಾರೆ. ಬಿಜೆಪಿಯವರು ಯಾರು ಹೋರಾಟವನ್ನು ಘೋಷಣೆ ಮಾಡುವುದಕ್ಕೆ? ಅವರ ಹೋರಾಟ ಅಂದ್ರೆ ಏನು ಅರ್ಥ? ಬಿಜೆಪಿ ಅವರು ಹೇಳಿದಂತೆ ತನಿಖೆ ಮಾಡಬೇಕಾ? ಹೇಗೆ ತನಿಖೆ ಮಾಡಬೇಕು ಎಂದು ಅವರ ಅಧ್ಯಕ್ಷರು ಬಂದು ಹೇಳುತ್ತಾರಾ? ಎಂದು ವಾಗ್ದಾಳಿ ನಡೆಸಿದರು,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT