ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದು ಲೋಕಾಯುಕ್ತ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದು, ಈ ಮೂಲಕ ಲೋಕಾಯುಕ್ತಕ್ಕೆ ಇದ್ದ ಮರ್ಯಾದೆಯನ್ನು ಕಳೆದಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಲೋಕಾಯುಕ್ತ ಅಧಿಕಾರಿಗಳು ಸಿಎಂ ಪರವಾದ ವರದಿಯನ್ನು ಕೊಡುತ್ತಾರೆ ಎಂಬುದು ಮೊದಲೇ ಗೊತ್ತಿತ್ತು. ಈ ವರದಿಯನ್ನು ನಾವು ಖಂಡಿಸುತ್ತೇವೆ. ಲೋಕಾಯುಕ್ತಕ್ಕೆ ಎಲ್ಲ ದಾಖಲೆಗಳನ್ನು ಕೊಟ್ಟಿದ್ದೇವೆ. ಹೀಗಿದ್ದರೂ ಸತ್ಯವನ್ನು ಮರೆಮಾಚುವ ವರದಿ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಡಾ ಪ್ರಕರಣದಲ್ಲಿ ಸಿಎಂ ಮುಗ್ಧರು. ಏನೂ ತಪ್ಪು ಮಾಡಿಲ್ಲ ಎನ್ನುವುದಾದರೇ 14 ನಿವೇಶನಗಳನ್ನು ಏಕೆ ವಾಪಸ್ ಕೊಟ್ಟರು. ಸಚಿವ ಭೈರತಿ ಸುರೇಶ್ 141 ಕಡತಗಳನ್ನು ಬೆಂಗಳೂರಿಗೆ ಕೊಂಡೊಯ್ದರು. ಅದರಲ್ಲೇ ಸಿಎಂ ಕುಟುಂಬದ ಸಾಕ್ಷಿ ಇರಬಹುದು ಎಂದು ಆರೋಪಿಸಿದರು.
ಇಡಿ ಹಗರಣ ನಡೆದಿರುವ ವಿಚಾರವನ್ನು ಪ್ರಸ್ತಾಪಿಸಿದೆ. ಲೋಕಾಯುಕ್ತ ಅಧಿಕಾರಿಗಳು ಒತ್ತಡಕ್ಕೆ ಮಣಿದಿರುವುದು ಕಾಣಿಸುತ್ತದೆ ಎಂದರು.
ಜಿಟಿ ದೇವೇಗೌಡ ಅವರು ಮಾತನಾಡಿ, ಎಫ್‌ಐಆರ್ ದಾಖಲಾದ ಕೂಡಲೇ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಟೀಕಿಸಿದರು.
ಎಫ್‌ಐಆರ್ ಆದ ಕೂಡಲೇ ಸಿದ್ದರಾಮಯ್ಯರ ರಾಜೀನಾಮೆ ಕೇಳುತ್ತಿದ್ದರು. ಈಗ ನೋಡಿ ಈ ಆರೋಪಕ್ಕೆ ಸಾಕ್ಷಿ ಇಲ್ಲ. ಈಗ ಏನು ಹೇಳುತ್ತಾರೆ. ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ಕೇಳುವುದು ತಪ್ಪು ಎಂದು ಹೇಳಿದ್ದೆ. ಅದನ್ನೇ ಮಹಾ ಅಪರಾಧದ ರೀತಿ ಬಿಂಬಿಸಿದ್ದರು. ಈಗ ಸತ್ಯ ಗೊತ್ತಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯರಂಥಾ ಅದೃಷ್ಟ ರಾಜಕಾರಣಿ ಇನ್ನೊಬ್ಬರಿಲ್ಲ, ಸಿದ್ದರಾಮಯ್ಯ ಅವರ ಭವಿಷ್ಯ ಮತ್ತು ಅದೃಷ್ಟ ಎರಡೂ ಗಟ್ಟಿಯಾಗಿದೆ. ಸಿದ್ದರಾಮಯ್ಯ 1983ರಲ್ಲಿ ಅದೃಷ್ಟದಿಂದ ಶಾಸಕರಾದರು. ಅವರ ಭವಿಷ್ಯ, ಅದೃಷ್ಟ ಗಟ್ಟಿಯಾಗಿಯೇ ಸಾಗಿದೆ. ಸಿದ್ದರಾಮಯ್ಯರಿಗೆ ಇರುವಂತಹ ಅದೃಷ್ಟ ಬೇರೆ ಯಾರಿಗೂ ಇಲ್ಲ. ಡಿಕೆಶಿ ಅವರು ಒಂದು ದಿನ ಸಿಎಂ ಆಗುತ್ತಾರೆ. ಆದರೆ, ಅದು ಯಾವಾಗ ಅಂತಾ ಗೊತ್ತಿಲ್ಲ. ಡಿಕೆ ಸಿಎಂ ಆಗಬೇಕಾದರೆ ಸಿದ್ದರಾಮಯ್ಯ ಬೆಂಬಲ ಬೇಕು. 10 ಶಾಸಕರನ್ನು ಇಟ್ಟುಕೊಂಡು ಯಾರೂ ಸಿಎಂ ಆಗಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದು ಕೇಳಿ ಕೇಳಿ ಜನಕ್ಕೂ ಸಾಕಾಗಿದೆ ಬಿಡಿ ಎಂದು ಕಿಡಿಕಾರಿದರು.