ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯಿಂದ ಬಿ.ವೈ.ವಿಜಯೇಂದ್ರ ಕೆಳಗಿಳಿಯಲೇಬೇಕು, ಈ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಯತ್ನಾಳ್ ಬಣ ಪಟ್ಟು ಹಿಡಿದಿದ್ದು, ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ.
ಶನಿವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಮ್ಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿದಿಲ್ಲ. ಚುನಾವಣೆ ನಡೆದರೆ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆಂದು ಹೇಳಿದರು.
ನಾವು ನಮ್ಮ ಹೋರಾಟದಿಂದ ಹಿಂದೆ ಸರಿದಿದ್ದೇವೆ, ನಾಮಪತ್ರ ಸಲ್ಲಿಸುವುದಿಲ್ಲ ಎಂಬ ಸುದ್ದಿ ಹರಡಲಾಗುತ್ತಿದೆ. ಆದರೆ. ಚುನಾವಣೆ ನಡೆದಾಗ ನಮ್ಮಲ್ಲಿಯೇ ಯಾರಾದರೊಬ್ಬರು ನಾಮಪತ್ರ ಸಲ್ಲಿಸುತ್ತೇವೆ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಮುಂದಿನ ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಈಗಿನಿಂದಲೇ ಸಂಘಟನಾ ಕೆಲಸ ಮಾಡಿದರಷ್ಟೇ ಚುನಾವಣೆಗೆ ಪಕ್ಷವನ್ನು ಸನ್ನದ್ಧವಾಗಿಸಲು ಸಾಧ್ಯ. ಈಗಿನ ನಾಯಕತ್ವದಿಂದ ಇದು ಸಾಧ್ಯವಿಲ್ಲ. ಹೀಗಾಗಿಯೇ ರಾಜ್ಯಾಧ್ಯಕ್ಷರನ್ನು ಬದಲಿಸಬೇಕು ಎಂಬುದು ನಮ್ಮ ಪ್ರತಿಪಾದನೆ. ಬಿಜೆಪಿ ಜಿಲ್ಲಾ ಘಟಕಗಳ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಕೆಜೆಪಿ ನಾಯಕರೇ ಹೆಚ್ಚು ಇದ್ದಾರೆ. ಈ ಬಗ್ಗೆ ಅಸಮಾಧಾನ ಹೆಚ್ಚಾಗಿದೆ. ಹೀಗಿದ್ದೂ ಚುನಾವಣೆಗೆ ನಾವು ಸಿದ್ಧರಿದ್ದೇವೆ. ನಮ್ಮ ಬಣದಿಂದ ಯಾರು ಕಣಕ್ಕೆ ಇಳಿಯಬೇಕು ಎಂಬುದನ್ನು ಆಗ ನಿರ್ಧರಿಸುತ್ತೇವೆಂದು ಹೇಳಿದರು.
ನಮ್ಮ ರಾಜ್ಯದ ಬೆಳವಣಿಗೆಗಳ ಬಗ್ಗೆ ನಾವು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದೇವೆ. ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಬಿಜೆಪಿ ರಾಜ್ಯಧಾಯಕ್ಷ ಚುನಾವಣಾ ಪ್ರಕ್ರಿಯೆಯನ್ನು ನಡೆಸಲು ರಾಜ್ಯದ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಗಮಿಸಲಿದ್ದಾರೆಂದು ಹೇಳಿದರು.
ಯತ್ನಾಳ್ ನೋಟಿಸ್‌ಗೆ ಉತ್ತರಿಸಿದ್ದಾರೆ. ನಾವು ಅವರೊಂದಿಗಿದ್ದೇವೆ. ಹೈಕಮಾಂಡ್‌ನ ನೋಟಿಸ್‌ನಿಂದ ನಮ್ಮಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಚುನಾವಣೆಯವರೆಗೂ ನಮ್ಮ ವಾದ ಮುಂದುವರಿಯುತ್ತದೆ. ಆರ್‌ಎಸ್‌ಎಸ್ ಮತ್ತು ಹೈಕಮಾಂಡ್ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ನನ್ನನ್ನು ಪರಿಗಣಿಸಿದರೆ, ನಾನು ರಾಜ್ಯ ಅಧ್ಯಕ್ಷನಾಗಲು ಸಿದ್ಧ. ರಾಜ್ಯ ಬಿಜೆಪಿಯಲ್ಲಿ ಪಕ್ಷದ ಸಂಘಟನೆ ಕುಸಿದಿದೆ. ಅದು ಒಂದು ಕಡೆ ವಾಲುತ್ತಿದೆ. ಅದನ್ನು ಸರಿಪಡಿಸಬೇಕು ಎಂದು ಅವರು ಹೇಳಿದರು.