ಬೆಂಗಳೂರು: ನನ್ನ ಧಾರ್ಮಿಕ ನಂಬಿಕೆಗಳು ನನ್ನ ವೈಯಕ್ತಿಕ ವಿಚಾರ. ಅದಕ್ಕೂ ಮತ್ತು ನನ್ನ ರಾಜಕೀಯಕ್ಕೂ ಯಾವ ಸಂಬಂಧವೂ ಇಲ್ಲ. ಓರ್ವ ನಂಬಿಗಸ್ಥ ಹಿಂದೂವಾಗಿ ನಾನು ಶಿವನ ಆರಾಧನೆ ಮಾಡುವುದರಲ್ಲಿ ತಪ್ಪೇನಿದೆ? ಅಮಿತ್ ಶಾ ಅವರೊಂದಿಗೆ ರಾಜಕೀಯ ಚರ್ಚೆ ಮಾಡಲು ನಾನು ಇಶಾ ಫೌಂಡೇಶನ್‌ಗೆ ಹೋಗಿರಲಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಚರ್ಚೆಯಾಗುತ್ತಿರುವ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದರು. ಅವರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿದ ಮಾತ್ರಕ್ಕೆ, ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದರೆ ಹೇಗೆ..?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಯುಗಾದಿ ಹಬ್ಬ ಆಚರಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅವರು ನಮ್ಮೆಲ್ಲರಿಗಿಂತ ಹೆಚ್ಚು ಹಿಂದೂ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ.
ಅದೇ ರೀತಿ ಕಾಶ್ಮೀರ ಮತ್ತು ಕರ್ನಾಟಕ ಒಂದೇ ದಿನದಲ್ಲಿ ಯುಗಾದಿ ಹಬ್ಬವನ್ನು ಆಚರಿಸುತ್ತದೆ ಎಂಬ ಸಂಗತಿ ನನಗೆ ತಿಳಿದೇ ಇರಲಿಲ್ಲ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿನಲ್ಲಿರುವ ಮಲ್ಲಿಕಾರ್ಜುನ ಎಂದರೆ ಶಿವ ಎಂದರ್ಥ. ನನ್ನ ಹೆಸರಿನಲ್ಲೂ ಶಿವ ಇದೆ. ಆದರೆ ನಾವು ಅನ್ಯ ಧರ್ಮಗಳನ್ನು ಗೌರವಿಸುವುದನ್ಜು ಕಲಿತಿದ್ದೇವೆ. ರಾಜಕೀಯಕ್ಕಾಗಿ ಧರ್ಮ ಬಳಸದಿರುವ ಕಾಂಗ್ರೆಸ್ ಪಕ್ಷದ ಬದ್ಧತೆಯ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ.." ಎಂದು ಡಿಕೆಶಿ ಇದೇ ವೇಳೆ ಮಾರ್ಮಿಕವಾಗಿ ಹೇಳಿದರು.
ಎಲ್ಲರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತ. ಇದನ್ನೇ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಪ್ರತಿಪಾದಿಸಿದರು. ಈ ಸಿದ್ಧಾಂತವನ್ನು ನಾವು ಚಾಚೂ ತಪ್ಪದೇ ಪಾಲಿಸುತ್ತೇವೆ. ನಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸುವುದರ ಜೊತೆಗೆ, ಅನ್ಯ ಧರ್ಮಗಳ ಧಾರ್ಮಿಕ ನಂಬಿಕೆಗನ್ನು ನಾವು ಗೌರವಿಸುತ್ತೇವೆ ಎಂದರು.