ಬೆಂಗಳೂರು: ಚುನಾವಣೆ ಮೊದಲು ಬೆಳ್ಳಿಯ ಮಾತುಗಳ್ಳನ್ನಾಡಿ, ಚುನಾವಣೆ ನಂತರ ಬಂಗಾರದ ಮೌನಾಚರಣೆ ಯಾಚಿಸಿದ್ದಾರೆ.ಅಧಿಕಾರಕ್ಕೆ ಬರುವ ಮುಂಚೆ ನೀವು ಕೊಟ್ಟ ಭರವಸೆ ಏನಾಯಿತು.? ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಗ್ಯಾರಂಟಿ ಹಣವನ್ನು ಕಟಾ ಕಟ್ ಹಾಕುತ್ತೇವೆ ಹೇಳಿದ್ದರು. ಆದರೆ, ಅವರು ಹೇಳಿದಂತೆ ಜನರಿಗೆ ಹಣ ಜಮೆ ಮಾಡುತ್ತಿಲ್ಲ. ನುಡಿದಂತೆ ನಡೆಯುತ್ತಿಲ್ಲ. ಯಾವ ದಿನ ಗೃಹ ಲಕ್ಷ್ಮಿ ಹಣವನ್ನು ಜಮಾ ಮಾಡುತ್ತಾರೆ ಎಂದು ಹೇಳಲಿ. ಆಗದಿದ್ದರೆ ನಾವೇ ಕ್ಯಾಲೆಂಡರ್ ತೆಗೆದುಕೊಂಡು ಹೋಗುತ್ತೇವೆ. ದಿನಾಂಕವನ್ನು ಮಾರ್ಕ್ ಮಾಡಿ ಕೊಡಲಿ ಎಂದು ಹೇಳಿದರು.
ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಆಗದ ಕಾರಣಕ್ಕೆ ಮಹಿಳೆಯರು ಗೊಂದಲಕ್ಕೆ ತುತ್ತಾಗಿದ್ದಾರೆ. ಮನಸ್ಸಿಗೆ ಬಂದ ಹಾಗೆ ಸರಕಾರ ಹಣವನ್ನು ಜಮೆ ಮಾಡುತ್ತಿದೆ. ಚುನಾವಣೆಗಳು ಬಂದಾಗ ಮೂರ್ನಾಲ್ಕು ತಿಂಗಳ ಹಣವನ್ನು ಒಮ್ಮೆಲೇ ಜಮೆ ಮಾಡುತ್ತಾರೆ. ಗ್ಯಾರಂಟಿ ಮೂಲಕ ಕಾಂಗ್ರೆಸ್ ಸರಕಾರ ಜನರನ್ನು ಧಿಕ್ಕು ತಪ್ಪಿಸುತ್ತಿದ್ದು, ಇದರ ವಿಧಾನಮಂಡಲದ ಒಳಗೆ, ಹೊರಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಗ್ಯಾರಂಟಿ ನೆಪದಲ್ಲಿ ರಾಜ್ಯದ ಜನರ ಮೇಲೆ ತೆರಿಗೆ, ಬೆಲೆ ಏರಿಕೆ ಭಾರ ಹೇರಿ ಸುಲಿಗೆ ಮಾಡುತ್ತಿದೆ. ಇನ್ನೊಂದು ಕಡೆ ಗ್ಯಾರಂಟಿ ಕೊಟ್ಟು ಜನರನ್ನು ಉದ್ಧಾರ ಮಾಡುತ್ತಿದ್ದೇವೆಂದು ಸುಳ್ಳು ಹೇಳುತ್ತಿದೆ. ಇಂತಹ ದ್ವಿಮುಖ ನೀತಿ ಬೇಡ. ಸಕಾಲಕ್ಕೆ ಗ್ಯಾರಂಟಿ ಹಣ ಜನರಿಗೆ ಮುಟ್ಟಬೇಕು. ಈ ಬಗ್ಗೆ ಜೆಡಿಎಸ್ ಹೋರಾಟ ನಡೆಸುತ್ತದೆ ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ವಿಫಲವಾಗಿದೆ. ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್... ಮಹಿಳೆಯರಿಗೆ 2000 ರೂಪಾಯಿ ಕೊಟ್ಟು ಸಬಲೀಕರಣ ಮಾಡ್ತೀವಿ ಅಂತ ಮಾತು ಕೊಟ್ಟಿದ್ದರು. ಆದರೆ, ಮಾತಿಗೆ ತಪ್ಪುತ್ತಿದ್ದಾರೆ. ಇದಕ್ಕೆ ಉತ್ತರಿಸಬೇಕೆಂದು ಆಗ್ರಹಿಸಿದರು.
ಏತನ್ಮಧ್ಯೆ, ಕೇತಗಾನಹಳ್ಳಿ ಭೂಕಬಳಿಕೆ ಆರೋಪ ಕುರಿತು ಮಾತನಾಡಿದ ಅವರು, ಕೇತಗಾನಹಳ್ಳಿ ಜಮೀನು ಸರ್ವೆ ವಿಚಾರವೇನು ಹೊಸದಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಪ್ರಯತ್ನ ನಡೆಸಿದ್ದಾರೆ. ಈ ಜಮೀನು ನಮ್ಮ ತಂದೆಯವರು 1985 ರಲ್ಲಿ ಈ ಜಮೀನು ಖರೀದಿ ಮಾಡಿದ್ದಾರೆ ಎಂದರು.
ಯಾವ ಶಾಸಕರೂ ಜೆಡಿಎಸ್ ತೊರೆಯಲ್ಲ
18 ಜೆಡಿಎಸ್ ಶಾಸಕರ ಪೈಕಿ ಯಾರೂ ಪಕ್ಷ ತೊರೆದು ಕಾಂಗ್ರೆಸ್ ಸೇರುವುದಿಲ್ಲ ಎಂದು ಇದೇ ವೇಳೆ ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.
ಆಡಳಿತ ಕಾಂಗ್ರೆಸ್ ಅಧಿಕಾರಕ್ಕೆ ಬಂದ 2 ವರ್ಷದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಭಿವೃದ್ಧಿ ಕಾರ್ಯಕ್ಕೆ ಇಷ್ಟು ಹಣ ಸಾಕೆ? ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಶಾಸಕರೇಕೆ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ? ಹೆಚ್.ಡಿ.ದೇವೇಗೌಡರ ಕುಟುಂಬದೊಂದಿದೆ ನಂಟು ಹೊಂದಿರುವ ಶಾಸಕರನ್ನು ಕಾಂಗ್ರೆಸ್ ಹೇಗೆ ಸೆಳೆಯುತ್ತದೆ? ಎಂದು ಪ್ರಶ್ನಿಸಿದರು.