ಹಾಸನ: ನಾನು ಮತ್ತು ಸಹೋದರ ಪ್ರಜ್ವಲ್ ರೇವಣ್ಣ ಇಬ್ಬರೂ ಹಾಸನದ ಜನತೆಯ ಋಣ ತೀರಿಸಲು ಶ್ರಮಿಸುತ್ತೇವೆ ಎಂದು ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ಅವರು ಹೇಳಿದ್ದಾರೆ.
ತಮ್ಮ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಬುಧವಾರ ಸಂಜೆ ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೂರಜ್, ಸೂರ್ಯ ಹುಟ್ಟೋದು ಮಾತ್ರವಲ್ಲ, ಸೂರ್ಯ ಪ್ರಜ್ವಲಿಸುತ್ತಾನೆ ಅನ್ನೋದು ನೆನಪಿರಲಿ, ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಗೌಡರ ಕುಟುಂಬ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಹಿಂಸಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಗೆ ಅಧಿಕಾರ ಶಾಶ್ವತವಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ ಮತ್ತು ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಎಚ್ಚರಿಕೆ ನೀಡಿದರು.
ನಿಮ್ಮ ಪ್ರಜ್ವಲ್ ಅಣ್ಣ ಮತ್ತು ಸೂರಜ್ ಅಣ್ಣ ಹಾಸನ ಜನತೆಯ ಋಣ ತೀರಿಸಲಿದ್ದಾರೆ. ಕೆಲವು ಅಧಿಕಾರಿಗಳು ಮತ್ತು ನಮ್ಮ ವಿರೋಧಿಗಳು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಗೆ ತೊಂದರೆ ಕೊಡುತ್ತಿದ್ದಾರೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ ಎಂದರು.
ಯಾವುದೂ ಶಾಶ್ವತವಲ್ಲ. ಯಾವ ಸರ್ಕಾರವೂ ಶಾಶ್ವತವಲ್ಲ. ನಾನು, ನನ್ನಿಂದ ಎಲ್ಲಾ ಅಂತ ಹೇಳುವವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂಥೆಂತವರು ಏನೇನ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ. ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತದೆ. ಈ ದ್ವೇಷದ ರಾಜಕಾರಣ ಉಳಿಯಲ್ಲ, ಅದನ್ನು ಬಿಟ್ಟು ದಿನ ಬೆಳಗ್ಗೆಯಾದರೆ ರೇವಣ್ಣ ಕುಟುಂಬವನ್ನು ಹೇಗೆ ತುಳಿಯೋದು? ದೇವೇಗೌಡರ ಕುಟುಂಬವನ್ನು ಹೇಗೆ ಮುಗಿಸೋದು ಎಂಬುದನ್ನು ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸೂರಜ್ ರೇವಣ್ಣ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಜನರು ಕಾಂಗ್ರೆಸ್‌ಗೆ 135 ಸ್ಥಾನಗಳನ್ನು ನೀಡಿದ್ದಾರೆ. ಆದರೆ ಆಡಳಿತ ಪಕ್ಷದ ನಾಯಕರು ಪ್ರತಿದಿನ ರೇವಣ್ಣ ಮತ್ತು ದೇವೇಗೌಡರ ಕುಟುಂಬಗಳನ್ನು ಹೇಗೆ ಹಾಳುಮಾಡಬೇಕು ಎಂದು ಪಿತೂರಿ ಮಾಡುತ್ತಿದ್ದಾರೆ ಎಂದರು.
ಕಬ್ಬು ಬೆಳೆಗಾರರಿಗೆ ಸಹಾಯ ಮಾಡಲು ತಂದೆ ರೇವಣ್ಣ ಮತ್ತು ಶ್ರವಣಬೆಳಗೊಳ ಶಾಸಕ ಸಿ ಎನ್ ಬಾಲಕೃಷ್ಣ ನಿರ್ಧರಿಸಿದ್ದಾರೆ ಎಂದು ಸೂರಜ್ ನೆರೆದಿದ್ದವರಿಗೆ ತಿಳಿಸಿದರು.