ಬೆಂಗಳೂರು/ ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಡಿನ್ನರ್ ಮೀಟಿಂಗ್ ಭಾರೀ ಸಂಚಲನ ಮೂಡಿಸಿದೆ. ಅತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸದಸ್ಯರ ಜೊತೆ ಟರ್ಕಿ ಪ್ರವಾಸದಲ್ಲಿದ್ದಾರೆ. ಈ ಹೊತ್ತಿನಲ್ಲೇ ಇತ್ತ ಸಿದ್ದರಾಮಯ್ಯ ಬಣದಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ಕಾಂಗ್ರೆಸ್ ರಾಜಕೀಯ ಪಡಸಾಲೆಯಲ್ಲಿ ಕುತೂಹಲ ಮೂಡಿಸಿದೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಗೃಹ ಸಚಿವ ಪರಮೇಶ್ವರ್, ಸಚಿವ ಹೆಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಪಾಲ್ಗೊಂಡಿದ್ದರು. ವಿಶೇಷವಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ ಮತ್ತು ಬೆಳಗಾವಿ ಜಿಲ್ಲಾ ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಶಿವಕುಮಾರ್ ಅವರ ರಾಜಕೀಯ ಶಕ್ತಿ ಕುಗ್ಗಿಸಲು ಏಕಾಏಕಿ ಪ್ರಯತ್ನಗಳು ನಡೆಯುತ್ತಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಎಂಎಲ್ಸಿ ಸಿಟಿ ರವಿ ಪ್ರಕರಣದ ನಂತರ ಡಿ.ಕೆ ಶಿವಕುಮಾರ್ ಪ್ರಬಲ ಸಂದೇಶ ರವಾನಿಸಿದ್ದಾರೆ.
ಸಿ.ಟಿ ರವಿ ಬಂಧನ ಮತ್ತು ನಂತರದ ಘಟನೆಗಳು ಸಿದ್ದರಾಮಯ್ಯ ಪಾಳಯಕ್ಕೆ ತಡವಾಗಿ ತಿಳಿಯಿತು ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆಗಳನ್ನು ಗಮನಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೇರಿದಂತೆ ಪ್ರತಿಪಕ್ಷಗಳು, ಸಿದ್ದರಾಮಯ್ಯ ದುರ್ಬಲವಾಗುತ್ತಿದ್ದಾರೆ ಎಂದು ಟೀಕಿಸಿದವು.
ಶಿವಕುಮಾರ್ ಅವರನ್ನು ಬೆದರಿಸುವ ತಂತ್ರವಾಗಿ, ಸಿದ್ದರಾಮಯ್ಯನವರ ಮ್ಯಾನ್ ಫ್ರೈಡೇ ಎಂದೇ ಹೆಸರಾದ ಸತೀಶ್ ಜಾರಕಿಹೊಳಿ ತಮ್ಮ ಪಾಳಯವನ್ನು ನಿರ್ಲಕ್ಷಿಸಲಾಗದು ಎಂದು ಬಿಂಬಿಸಲು ಭೋಜನ ಕೂಟ ಏರ್ಪಡಿಸಿದರು ಎಂದು ರಾಜಕೀಯ ಪಂಡಿತರು ಹೇಳುತ್ತಾರೆ. ಈ ಹಿಂದೆ ಪರಮೇಶ್ವರ ಸೇರಿದಂತೆ ಅಹಿಂದ ನಾಯಕರು ಆಯೋಜಿಸಿದ್ದ ಔತಣಕೂಟದಲ್ಲಿ ಶಿವಕುಮಾರ್ ಕಾಣಿಸಿಕೊಂಡಿರಲಿಲ್ಲ.
ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಪವರ್ ಶೇರಿಂಗ್ ವಿಚಾರ, ಈ ಮೂರು ವಿಚಾರಗಳ ಬಗ್ಗೆ ಆಪ್ತ ಸಚಿವರ ಜೊತೆ ಸಿಎಂ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಪ್ರಮುಖವಾಗುತ್ತೆ. ಹೈಕಮಾಂಡ್ ಬದಲಾವಣೆಗೆ ಒಪ್ಪಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ಹೇಗಿರಲಿದೆ ಎಂಬುದರ ಬಗ್ಗೆಯೂ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆ ಆಗಿದೆ ಎಂಬ ಮಾಹಿತಿ ಇದೆ. ಪವರ್ ಶೇರಿಂಗ್ ವಿಚಾರದಲ್ಲಿ ಸಿಎಂ ಸೈಲೆಂಟ್ ಗೇಮ್ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ ಹಲವು ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಜಾರಕಿಹೊಳಿ ಒಪ್ಪಿಕೊಂಡಿದ್ದರೂ, ಸಿಎಂ ಬದಲಾವಣೆ ಅಥವಾ ಸಚಿವ ಸಂಪುಟ ಪುನಾರಚನೆ ಅಥವಾ ಡಿಸಿಎಂ ನೇಮಕದ ಬಗ್ಗೆ ನಡೆದಿರುವ ಚರ್ಚೆ ಬಗ್ಗೆ ಏನನ್ನೂ ಹೇಳಲಿಲ್ಲ. ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಪಕ್ಷದ ಮುಖಂಡರು ಸಲಹೆಗಳನ್ನು ನೀಡಿದರು ಎಂದಷ್ಟೆ ತಿಳಿಸಿದರು.
ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಜಾರಕಿಹೊಳಿ ಅವರು, ಕರೆ ತೆಗೆದುಕೊಳ್ಳುವುದು ಹೈಕಮಾಂಡ್‌ಗೆ ಬಿಟ್ಟದ್ದು, ಆದರೆ ಒಬ್ಬ ನಾಯಕ ಎರಡು ಪ್ರಮುಖ ಸ್ಥಾನಗಳನ್ನು ಅಲಂಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಪಕ್ಷದ ಉನ್ನತ ಹುದ್ದೆಯ ಆಕಾಂಕ್ಷಿಯೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ಔತಣಕೂಟವು ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟವನ್ನು ಬಹಿರಂಗಪಡಿಸಿದೆ ಎಂದು ಮಾಜಿ ಸಿಎಂ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸೌಹಾರ್ದವಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.