ಬೆಂಗಳೂರು: ರಾಜ್ಯದಲ್ಲಿನ ಅಹಿಂದ ಸಚಿವರುಗಳ ಡಿನ್ನರ್ ಮೀಟಿಂಗ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದಾಗಲೇ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರು. ಈ ಡಿನ್ನರ್ ಮೀಟಿಂಗ್ ಕುರಿತಂತೆ ಇದೀಗ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು, ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ. ಔತಣಕೂಟಗಳನ್ನು ಏರ್ಪಾಡು ಮಾಡಿಸುತ್ತಿರುವುದೇ ಸಿಎಂ ಸಿದ್ದರಾಮಯ್ಯ. 30 ತಿಂಗಳ ನಂತರ ಸಿಎಂ ಸ್ಥಾನದಿಂದ ಇಳಿಯಬೇಕು. ಹೀಗಾಗಿ ಸಿದ್ದರಾಮಯ್ಯ ಏನೇನೋ ಆಟಗಳನ್ನು ಆಡುತ್ತಿದ್ದಾರೆ ಎಂದು ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.
ಯಾರೂ ಏನೇ ಮಾಡಿದರೂ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ತಪ್ಪಿಸಲು ಆಗಲ್ಲ. 40 ವರ್ಷಗಳಿಂದ ಡಿಕೆ ಶಿವಕುಮಾರ್ ಕಾಂಗ್ರೇಸ್ಸಿನಲ್ಲಿದ್ದಾರೆ. ಡಿಕೆ ಶಿವಕುಮಾರ್ ಎಲ್ಲಿಗೆ ಹೋದರೂ ಕಾರ್ಯಕರ್ತರು ಅವರನ್ನು ಗುರುತಿಸುತ್ತಾರೆ. ಆದರೆ ಸಿದ್ದರಾಮಯ್ಯ ಚೇಲಾಗಳನ್ನು ಜೊತೆಯಲ್ಲಿಟ್ಟುಕೊಂಡು ಆಟವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.