ಡಿ.ಕೆ ಸುರೇಶ್ 
ರಾಜಕೀಯ

ಸಿದ್ದರಾಮಯ್ಯ ಬೇಕಾದರೂ KPCC ಅಧ್ಯಕ್ಷರಾಗಬಹುದು, ಪಕ್ಷದ ವರಿಷ್ಠರು ಬಯಸಿದರೆ ಸ್ಥಾನ ತ್ಯಜಿಸಲು ಡಿಕೆಶಿ ಸಿದ್ಧ: ಡಿ.ಕೆ ಸುರೇಶ್

ಆ ಹುದ್ದೆಗೆ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಡಾ.ಪರಮೇಶ್ವರ್ ಮತ್ತೊಮ್ಮೆ ಆದರೂ ಸಂತೋಷ. ಈ ಸ್ಥಾನ ಅಲಂಕರಿಸಬೇಕೆಂದು ಬೇರೆ ಯಾರಿಗೆ ಆತುರವಿದೆಯೋ ಅವರೇ ಆದರೂ ಸಂತೋಷ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಜನ ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ. ಈಗಾಗಲೇ ಸಿಎಂ ಸ್ಥಾನದಲ್ಲಿ ಒಬ್ಬರು ಕೂತಿದ್ದಾರೆ. ಪಕ್ಷದ ಅದ್ಯಕ್ಷ ಸ್ಥಾನದಲ್ಲಿ ಮತ್ತೊಬ್ಬರು ಕೂತಿದ್ದಾರೆ. ಆ ಸ್ಥಾನಗಳು ಖಾಲಿಯಾಗುವ ಸಂದರ್ಭದಲ್ಲಿ ಪಕ್ಷ ಅದರ ಬಗ್ಗೆ ಚರ್ಚೆ ಮಾಡಲಿದೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು-ನೀವು ಇಲ್ಲಿ ಕೂತು ಚರ್ಚೆ ಮಾಡಿದರೆ ಅರ್ಥವಿಲ್ಲ. ಏನೇ ತೀರ್ಮಾನ ಮಾಡಬೇಕಾದರೂ ಪಕ್ಷದ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ಮಾಡಬೇಕು. ಆಕಾಂಕ್ಷಿಗಳಿದ್ದಾರೆ, ಅಧ್ಯಕ್ಷ ಸ್ಥಾನದಲ್ಲಿ ಶಿವಕುಮಾರ್ ಅವರೇ ಇರಬೇಕು ಎಂದೇನಿಲ್ಲ.

ಅವರು ನಾಲ್ಕೈದು ವರ್ಷಗಳಿಂದ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಆ ಹುದ್ದೆಗೆ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಡಾ.ಪರಮೇಶ್ವರ್ ಮತ್ತೊಮ್ಮೆ ಆದರೂ ಸಂತೋಷ. ಈ ಸ್ಥಾನ ಅಲಂಕರಿಸಬೇಕೆಂದು ಬೇರೆ ಯಾರಿಗೆ ಆತುರವಿದೆಯೋ ಅವರೇ ಆದರೂ ಸಂತೋಷ. ಯಾರೂ ಆಗಬಾರದು ಎಂಬುದೇನಿಲ್ಲ. ಪಕ್ಷದ ದೃಷ್ಟಿಯಿಂದ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ಎಲ್ಲ ನಾಯಕರ ಮೇಲಿದೆ. ಸಿದ್ದರಾಮಯ್ಯ ಅವರು ಬೇಕಾದರೂ ಅಧ್ಯಕ್ಷರಾಗಬಹುದು, ನಾನಂತೂ ಆಕಾಂಕ್ಷಿಯಲ್ಲ" ಎಂದು ತಿಳಿಸಿದರು.

ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್, ಸಿದ್ದರಾಮಯ್ಯ

ಅಧ್ಯಕ್ಷ ಸ್ಥಾನ ಬದಲಾವಣೆಗೆ ಪಕ್ಷದಲ್ಲಿ ಯಾರೂ ತರಾತುರಿಯಲ್ಲಿಲ್ಲ. ಪಕ್ಷದ ಏಳಿಗೆ, ಒಳಿತು ಬಯಸುವವರು, ಜನರ ಸಂಕಷ್ಟ ಅರಿತಿರುವವರು, ತಮ್ಮ ಮುಂದಿರುವ ಸವಾಲು ತಿಳಿದು ಪಕ್ಷವನ್ನು ಸಂಘಟಿಸುವವರು ಈ ಸ್ಥಾನಕ್ಕೆ ಆಯ್ಕೆಯಾಗಬೇಕು ಎಂದು ಚಿಂತನ ಮಂಥನ ಸಭೆ ನಡೆದರೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸುರೇಶ್ ತಿಳಿಸಿದರು.

ವಿಶೇಷ ಸಂದರ್ಭಗಳಲ್ಲಿ ಸಚಿವರು, ನಾಯಕರು ಒಟ್ಟಿಗೆ ಸೇರಿ ಔತಣಕೂಟ ನಡೆಸುವುದು ಸಾಮಾನ್ಯ. ಇದಕ್ಕೆ ರಾಜಕೀಯವಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಹೀಗೆ ಊಟಕ್ಕೆ ಸೇರಿದಾಗ ಹಲವಾರು ಚರ್ಚೆ ಮಾಡುವುದು ಸಾಮಾನ್ಯ. ಹೊಸವರ್ಷದ ಹಿನ್ನೆಲೆಯಲ್ಲಿ ಕೆಲವು ಸಚಿವರು ಔತಣಕೂಟಕ್ಕೆ ಸೇರಿದ್ದರು. ಅದರಲ್ಲಿ ಸಿಎಂ ಸೇರಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

ಸಿಎಂ ಕುರ್ಚಿ ಬಗ್ಗೆ ಚರ್ಚೆಯಾಗುತ್ತಿದ್ದು, 2028ಕ್ಕೆ ಸಿಎಂ ಆಕಾಂಕ್ಷಿ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನೀವು ಅವರನ್ನು ಕೇಳಬೇಕು. ಅವರು ಆಕಾಂಕ್ಷಿಯಾಗಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರು ನಮ್ಮ ಪಕ್ಷದ ನಾಯಕರು, ಸಮುದಾಯದ ಮುಖಂಡರು. ರಾಜಕೀಯದಲ್ಲಿರುವವರು ತಮ್ಮದೇ ಆಸೆ ಆಕಾಂಕ್ಷಿ ಇಟ್ಟುಕೊಂಡಿರುತ್ತಾರೆ. ಅವರೊಬ್ಬರೆ ಅಲ್ಲ, ಈ ಆಸೆ ಆಕಾಂಕ್ಷೆ ಇಟ್ಟುಕೊಂಡಿರುವ ಸಾಕಷ್ಟು ಜನ ಇದ್ದಾರೆ. ಅದು ತಪ್ಪು ಎಂದು ಹೇಳಲು ಆಗುವುದಿಲ್ಲ. ಅವರನ್ನು ಸಿಎಂ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ಸಿಎಂ ಮಾಡುವ ವಿಚಾರ ಚರ್ಚೆಯಾಗುತ್ತದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮ 140 ಶಾಸಕರ ಮೇಲಿದೆ. ಜನ ಕಾಂಗ್ರೆಸ್ ಪಕ್ಷವನ್ನು ಜನ ಅಧಿಕಾರಕ್ಕೆ ತಂದಿದ್ದು, ಇದಕ್ಕೆ ಎಷ್ಟು ಕಷ್ಟಪಡಲಾಗಿದೆ ಎಂದು ಎಲ್ಲರೂ ಅರಿತು ಎಚ್ಚರಿಕೆ ನಡೆ ಇಡಬೇಕು” ಎಂದರು.

ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಬೇಡಿಕೆ ವಿಚಾರವಾಗಿ ಕೇಳಿದಾಗ, “ಅಧ್ಯಕ್ಷ ಸ್ಥಾನವನ್ನು ಪಕ್ಷ ಶಿವಕುಮಾರ್ ಅವರಿಗೆ ನೀಡಿದೆಯೇ ಹೊರತು, ಶಿವಕುಮಾರ್ ಅವರು ಕಿತ್ತುಕೊಂಡಿಲ್ಲ. ಪಕ್ಷದ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಅವರು ಶಿವಕುಮಾರ್ ಅವರಿಗೆ ಈ ಜವಾಬ್ದಾರಿ ನೀಡಿದ್ದಾರೆ. ಅವರು ಬೇಡ ಎಂದು ತೀರ್ಮಾನಿಸಿದರೆ ಈ ಸ್ಥಾನ ತ್ಯಜಿಸಲು ಶಿವಕುಮಾರ್ ಅವರು ಸಿದ್ಧರಿದ್ದಾರೆ. ಇವು ಶಾಶ್ವತವಾದ ಹುದ್ದೆಗಳಲ್ಲ. ತೀರ್ಮಾನ ಮಾಡಬೇಕಾದವರು ವರಿಷ್ಠರು. ಒಂದು ವ್ಯಕ್ತಿಗೆ ಒಂದು ಹುದ್ದೆ ಎಂದು ಹೇಳುವುದು ಎಐಸಿಸಿ ನಾಯಕರನ್ನು ಪ್ರಶ್ನೆ ಮಾಡುವಂತಾಗುತ್ತದೆ. ಇಂತಹ ವಿಚಾರವನ್ನು ಮಾಧ್ಯಮಗಳ ಮುಂದೆ ಮಾತನಾಡುವುದಕ್ಕಿಂತ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ದೃಷ್ಟಿಯಿಂದ ಯಾರು ಬೇಕಾದರೂ ತಮ್ಮ ಬೇಡಿಕೆ, ಸಲಹೆಗಳನ್ನು ಅವರ ಮುಂದೆ ಇಡಬಹುದು” ಎಂದು ತಿಳಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT