ಬೆಂಗಳೂರು: ಹಿಮಾಚಲ ಪ್ರದೇಶ ಹಾಗೂ ಕೇರಳ ಸರ್ಕಾರ ದಿವಾಳಿಯ ದಿಕ್ಕಿನಲ್ಲಿ ಸಾಗುತ್ತಿದ್ದು, ಇದೀಗ ಕರ್ನಾಟಕದ ಕಾಂಗ್ರೆಸ್ ಸರ್ಕಾರವೂ ದಿವಾಳಿಯತ್ತ ಹೆಜ್ಜೆ ಇಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮಂಗಳವಾರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರವು 60 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದ್ದು, ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ದಯಾ ಮರಣ ಕೋರಿ ಪತ್ರ ಬರೆದಿದ್ದಾರೆ. ಕಾಮಗಾರಿ ಸ್ಥಗಿತಗೊಳಿಸಿದ ಗುತ್ತಿಗೆದಾರರಿಗೆ ಸರಕಾರ 32 ಸಾವಿರ ಕೋಟಿ ಬಾಕಿ ಬಿಲ್ ಪಾವತಿ ಮಾಡಬೇಕಿದ್ದು, ಅವುಗಳನ್ನು ಪಾವತಿಸಲು ಸರಕಾರ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿದೆ. ಈಗ ಆಶಾ ಕಾರ್ಯಕರ್ತೆಯರು ಸಂಬಳ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರೈತರಿಂದ ಸೊಪ್ಪು ಖರೀದಿಸಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ ಎಂದು ಟೀಕಿಸಿದರು.
ಇದು ಭ್ರಷ್ಟ ಸರ್ಕಾರವಾಗಿದ್ದು, ಬೆಂಗಳೂರಿನಲ್ಲಿ 30x40 ಚದರ ಅಡಿ ವಿಸ್ತೀರ್ಣದ ವಸತಿ ನಿವೇಶನಗಳಿಗೆ ನಾಗರಿಕರು 10 ಲಕ್ಷ ರೂ 40x60 ಚದರ ಅಡಿ ಅಳತೆಗೆ 20 ಲಕ್ಷ ರೂ ಕೊಡಬೇಕಿದೆ. ಕಳೆದ 6 ತಿಂಗಳಿನಿಂದ ಕಾಂಗ್ರೆಸ್ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ಇದೆ. ಹಿಂದೆ ನಮ್ಮ ವಿರುದ್ಧ 40 ಪರ್ಸೆಂಟ್ ಕಮಿಷನ್ ಎಂದು ಫೋಟೋ ಹಿಡಿಸಿದ್ದರು. ಅದೇ ಗುತ್ತಿಗೆದಾರರಿಂದ ಈಗ 40 ಪರ್ಸೆಂಟ್ಗಿಂತ ಹೆಚ್ಚು ಕಮಿಷನ್ ಪೀಕುತ್ತಿದ್ದಾರೆ. ಅಂದಾಜು 32 ಸಾವಿರ ಕೋಟಿ ರೂ. ಸರ್ಕಾರದಿಂದ ಬರಬೇಕಿದೆ. ಸರ್ಕಾರ ಈಗ ಮತ್ತೆ ತೆರಿಗೆಗಳನ್ನು ಹಾಕಬೇಕು ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
2024-25ರ ಬಜೆಟ್‌ನಲ್ಲಿ ಸರ್ಕಾರವು ಮಾಡಿದ ಒಟ್ಟು ಘೋಷಣೆಗಳಲ್ಲಿ ಶೇ.55.69ರಷ್ಟು ಮಾತ್ರ ಸಾಧಿಸಲು ಸಾಧ್ಯವಾಗಿದೆ. ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. ಬಿಜೆಪಿ ಗಿಂತ ಹೆಚ್ಚು ಅಭಿವೃದ್ಧಿ ಮಾಡಿದ್ದೇವೆ. ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಹೆಚ್ಚು ಅನುದಾನ ಕೊಟ್ಟಿರುವುದಾಗಿ ಹೇಳಿದ್ದಾರೆ. ಗಂಗಾ ಕಲ್ಯಾಣದಲ್ಲಿ ಬಿಜೆಪಿ 60 ಕೋಟಿ ರೂ. ಕೊಟ್ಟಿತ್ತು, ಈಗ 80 ಕೋಟಿ ರೂ. ಆಗಬೇಕು. ಆದರೆ, ಅವರು ಕೊಟ್ಟಿದ್ದು ಕೇವಲ 40 ಕೋಟಿ ರೂ. ಅಷ್ಟೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ವಯಂ ಉದ್ಯೋಗ ಯೋಜನೆಗೆ ನಮ್ಮ ಸರ್ಕಾರ ಇದ್ದಾಗ 100 ಕೋಟಿ ರೂ. ಕೊಟ್ಟಿದ್ದೆವು. ಕಾಂಗ್ರೆಸ್ ಅದನ್ನ 45 ಕೋಟಿ ರೂ.ಗೆ ಇಳಿಸಿದೆ. ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ನಾವು ಕೊಟ್ಟಿದ್ದು 100 ಕೋಟಿ ರೂ., ಅವರು ಕೊಟ್ಟಿದ್ದು 40 ಕೋಟಿ ರೂ. ದಲಿತರ ಬಗ್ಗೆ ಇರುವ ಪ್ರೀತಿ ಇದುವೆಯಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಸಂವಿಧಾನದ ಪುಸ್ತಕ ಖಾಲಿ ಇತ್ತೋ, ಪ್ರಿಂಟ್ ಆಗಿತ್ತೊ ಗೊತ್ತಿಲ್ಲ. ಹಿಂದುಗಳಿದ ವರ್ಗಗಳಿಗೆ ದೇವರಾಜು ಅರಸು ಅಭಿವೃದ್ಧಿ ನಿಗಮ 190 ಕೋಟಿ ರೂ. ನಾವು ಕೊಟ್ಟಿದ್ದೆವು. ಅವರು 100 ಕೋಟಿ ರೂ. ಕೊಟ್ಟಿದ್ದಾರೆ. ವಿಶ್ವಕರ್ಮ ಸಮಿದಾಯಕ್ಕೆ 13 ಕೋಟಿ ರೂ. ನೀಡಿದ್ದಾರೆ. ಸಂಗೊಳ್ಳಿರಾಯಣ್ಣ ಕ್ಷೇತ್ರ ಅಭಿವೃದ್ಧಿ ಗೆ ಅವರು 50 ಕೋಟಿ ರೂ. ಕೊಟ್ಟಿದ್ದಾರೆ ಎಂದು ಅಶೋಕ್ ಅಂಕಿಅಂಶ ಸಹಿತ ಟೀಕಾಸ್ತ್ರ ಪ್ರಯೋಗಿಸಿದರು.
ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ನಾವು 15 ಕೋಟಿ ರೂ. ಕೊಟ್ಟಿದ್ದೆವು. ಇವರು 5 ಕೋಟಿ ರೂ. ಕೊಟ್ಟಿದ್ದಾರೆ. ವೀರಶೈವ ನಿಗಮಕ್ಕೆ 100 ಕೋಟಿ ಕೊಟ್ಟಿದ್ದೆವು., ಇವರು 50 ಕೋಟಿ ರೂ. ಕೊಟ್ಟಿದ್ದಾರೆ. ದೇವಾಲಯ ಇತರೆ ಧಾರ್ಮಿಕ ಸಂಸ್ಥೆಗಳಿಗೆ 274.68 ಕೋಟಿ ರೂ. ನಾವು ಕೊಟ್ಟಿದ್ದೆವು. ಕಾಂಗ್ರೆಸ್ನವರು 90 ಪರ್ಸೆಂಟ್ ಡಿಸ್ಕೌಂಟ್, 17 ಕೋಟಿ ರೂ. ಕೊಟ್ಟಿದ್ದಾರೆ. ಮಠ, ದೇವಾಲಯಗಳಿಗೆ ಸಿಎಂ ಸಹಾಯ ಧನಕ್ಕೆ ಬಿಜೆಪಿ ಅವಧಿಯಲ್ಲಿ 154.85 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ 30 ಕೋಟಿ ರೂ. ಕೊಟ್ಟಿದೆ. ಅನ್ನಕ್ಕೂ ಕನ್ನ ಹಾಕಿದ್ದಾರೆ. ಕಬರ್ ಸ್ತಾನ್ ಅಂತ ಇರೋಬರೋ ಭೂಮಿಗೆಲ್ಲ ಹಾಕಿದ್ದಾರೆ. ಸಿದ್ದರಾಮಯ್ಯ ಹಿಂದೂಗಳಿಗೆ ಎಷ್ಟು ಕೊಟ್ಟಿದ್ದಾರೆ ನೋಡಿ, ಹಿಂದೂ ರುದ್ರಭೂಮಿಗೆ 10 ಕೋಟಿ ರೂ. ಕೊಟ್ಟಿದ್ದಾರೆ. ನಾವು 15 ಕೋಟಿ ಕೊಟ್ಟಿದ್ದೆವು. ರೋಟಿ, ಕಪಡಾ ಮಕಾನ್ ನೇಕಾರ್ ಯೋಜನೆಗೆ 125.77 ಕೋಟಿ ಬಿಜೆಪಿ ಕೊಟ್ಟಿದೆ. ಕೇವಲ 10 ಕೋಟಿ ರೂ. ಮಾತ್ರ ಕಾಂಗ್ರೆಸ್ ಕೊಟ್ಟಿದೆ. ವಿಪಕ್ಷಗಳಿಗೆ ಲೆಕ್ಕಾ ಗೊತ್ತಿಲ್ಲ ಅಂತ ನಮ್ಮ ಮೇಲೆ ಹೇಳುತ್ತಾರೆ ಸಿಐಡಿ ಡಿಐಜಿ ಶಾಂತನು ಸಿನ್ಹಾ ಎಂದು ಕಿಡಿಕಾರಿದರು.