ಬೆಂಗಳೂರಿನ ಭಾರತ್ ಜೋಡೋ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತುಕತೆ ನಡೆಸುತ್ತಿರುವುದು. 
ರಾಜಕೀಯ

ಕಾರ್ಯವೈಖರಿ ಸುಧಾರಿಸದ ಸಚಿವರು ಸಂಪುಟದಿಂದ ಔಟ್: ಸುರ್ಜೇವಾಲಾ ಖಡಕ್ ಎಚ್ಚರಿಕೆ

ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲೇ ಸಚಿವರ 20 ತಿಂಗಳ ಕಾರ್ಯವೈಖರಿ ಹಾಗೂ ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಕುರಿತ ವರದಿಯನ್ನು ಡಿಕೆ.ಶಿವಕುಮಾರ್ ಅವರು ಸುರ್ಜೇವಾಲಾ ಅವರಿಗೆ ಸಲ್ಲಿಸಿದರು.

ಬೆಂಗಳೂರು: ಸಚಿವರು ಕಾರ್ಯ ವೈಖರಿಯನ್ನು ಸುಧಾರಿಸದಿದ್ದರೆ ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಎಚ್ಚರಿಕೆ ನೀಡಿದ್ದಾರೆ.

ಜನವರಿ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಪಕ್ಷದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್' ಸಮಾವೇಶದ ಪೂರ್ವಭಾವಿ ಸಿದ್ಧತೆ ಸಭೆಯ ಭಾಗವಾಗಿ ಸೋಮವಾರ ನಡೆದ ಕೆಪಿಸಿಸಿ ಸಭೆಯನ್ನುದ್ದೇಶಿಸಿ ಸುರ್ಜೇವಾಲಾ ಆವರು ಮಾತನಾಡಿದರು.

ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲೇ ಸಚಿವರ 20 ತಿಂಗಳ ಕಾರ್ಯವೈಖರಿ ಹಾಗೂ ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಕುರಿತ ವರದಿಯನ್ನು ಡಿಕೆ.ಶಿವಕುಮಾರ್ ಅವರು ಸುರ್ಜೇವಾಲಾ ಅವರಿಗೆ ಸಲ್ಲಿಸಿದರು.

ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಸುರ್ಜೇವಾಲಾ ಅವರು, ಸಚಿವರ ಕಾರ್ಯಕ್ಷಮತೆಯ ಕುರಿತ ವರದಿಗಾಗಿ ಸಿಎಂ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳಿದರು. 60 ದಿನಗಳಲ್ಲಿ ಎಲ್ಲಾ ಸಚಿವರನ್ನು ಪ್ರತ್ಯೇಕವಾಗಿ ಕರೆಯಿಸಿ ಚರ್ಚೆ ಮಾಡುತ್ತೇನೆಂದು ಹೇಳಿದರು. ಇದೇ ವೇಳೆ ಪಕ್ಷದ ಶಿಸ್ತನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು. ನಮಗೆ ಕಾರ್ಯಕರ್ತರು ಮುಖ್ಯ, ಸರ್ಕಾರದ ದೌರ್ಬಲ್ಯಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದರು.

ಬಳಿಕ ಸೋನಿಯಾ ಗಾಂಧಿ ತ್ಯಾಗದ ಉದಾಹರಣೆ ನೀಡಿದ ಅವರು, ಪಕ್ಷದ ಹಿತಕ್ಕಾಗಿ ಕೆಲವೊಮ್ಮೆ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ" ಎಂದು ಹೇಳಿದರು.

ಸಂಪುಟ ಪುನಾರಚನೆ ಅನಿವಾರ್ಯವಿದ್ದು, ಫಲಿತಾಂಶ ತೋರದ ಸಚಿವರು ತಮ್ಮ ಸ್ಥಾನಕ್ಕೆ ವಿದಾಯ ಹೇಳಬೇಕಾಗುತ್ತದೆ. ರಾಜ್ಯದ ಜನರಿಗೆ, ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಅವರು ನೀಡಿದ ಕೊಡುಗೆಯನ್ನು ಆಧರಿಸಿ ಸಚಿವರನ್ನು ಮೌಲ್ಯಮಾಪನ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಸಚಿವರನ್ನು ಕೆಪಿಸಿಸಿ ಕಚೇರಿಕೆ ಕರೆಯಲಾಗುವುದು. ಜನರ ಒಳಿತಿಗಾಗಿ ಏನು ಮಾಡಿದ್ದಾರೆ, ಪಕ್ಷದ ನೀತಿಗಳನ್ನು ಪ್ರಚಾರ ಮಾಡಿರುವುದು, ಕಾರ್ಯಕರ್ತರಿಗೆ ಸಹಾಯ ಮಾಡಿರುವುದರ ಕುರಿತು ಪರಿಶೀಲಿಸಲಾಗುವುದು. ಈ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳದಿದ್ದರೆ, ಸಚಿವರ ವಿರುದ್ಧದ ಕಾರ್ಯಕರ್ತರು ದೂರುಗಳು ಮುಂದುವರೆಯುತ್ತಲೇ ಇರುತ್ತದೆ ಎಂದರು.

ಶಾಸಕರು, ಸಚಿವರು, ನಾಯಕರು ಯಾರೂ ಪಕ್ಷದ ಶಿಸ್ತು ಮೀರಬಾರದು. ಪಕ್ಷ ತಾಯಿ ಇದ್ದಂತೆ. ಸರ್ಕಾರ ಮಗು ಇದ್ದಂತೆ. ಯಾವ ನಾಯಕರೂ ಪಕ್ಷವನ್ನು ನೆಲಸಮ ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಪಕ್ಷವನ್ನು ನೆಲಸಮ ಮಾಡಲು ಮುಂದಾದರೆ ನಾವು ಸಹಿಸುವುದಿಲ್ಲ. ನಮ್ಮ ನಾಯಕರಲ್ಲಿ ಕೆಲವರಿಗೆ ಶಿಸ್ತು ಇಲ್ಲ. ಪಕ್ಷಕ್ಕಿಂತ ನಾವು ದೊಡ್ಡವರು ಎಂಬ ಭಾವನೆ ಕೆಲವರಲ್ಲಿ ಇದ್ದಂತಿದೆ. ಈಗಲೂ ನಾನು ಮನವಿ ಮಾಡುತ್ತೇನೆ. ಶಾಸಕರು, ನಾಯಕರು, ಸಚಿವರು ಯಾರೂ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವಯುತವಾಗಿ ಕಾಣಬೇಕೆಂದು ಮನವಿ ಮಾಡಿದರು.

ಶಿಸ್ತು ಮೂಲ ಮಂತ್ರವಾಗಬೇಕು. ಅದು ಇಲ್ಲದೆ ಪಕ್ಷ ಉಳಿಯುವುದಿಲ್ಲ. ಕಾಂಗ್ರೆಸ್ ಆರ್‌ಎಸ್‌ಎಸ್ ಮತ್ತು ಬಿಜೆಪಿಗಿಂತ ಭಿನ್ನವಾಗಿದೆ, ಮೋದಿ, ಶಾ ಮತ್ತು ಆರ್‌ಎಸ್‌ಎಸ್ ವಿರುದ್ಧ ಯಾರಾದರೂ ಮಾತನಾಡಿದರೆ ಅಲ್ಲಿ ನಾಯಕರನ್ನು ಪಕ್ಷದಿಂದ ಹೊರಹಾಕಲಾಗುತ್ತದೆ. ಆದರೆ, ಕಾಂಗ್ರೆಸ್‌ನಲ್ಲಿ ನಾವು ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆಂದು ತಿಳಿಸಿದರು.

ರಾಜ್ಯಾದ್ಯಂತ ಕಾಂಗ್ರೆಸ್ ಭವನ ಸ್ಥಾಪಿಸಿ. 100 ಕಾಂಗ್ರೆಸ್ ಭವನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಫೆಬ್ರವರಿ 15 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ಕಟ್ಟಡಕ್ಕೆ ಬೇಕಾದ ಭೂಮಿ ಗುರುತಿಸಲಾಗಿದೆ. ಮುಂದಿನ ವರ್ಷದೊಳಗೆ ಪಾರ್ಟಿಯನ್ನು ಬಲಿಷ್ಠ ಮಾಡಿ.‌ ಕರ್ನಾಟಕದಲ್ಲಿ ಪಕ್ಷವನ್ನು ಭದ್ರಗೊಳಿಸಿ. 2025ಕ್ಕೆ ಬೂತ್ ಮಟ್ಟದಲ್ಲಿ ಪಕ್ಷ ಸದೃಢಗೊಳಿಸಬೇಕು.

ದೂರ ಇದೆ ಎಂದು ಯಾರೂ ಸುಮ್ಮನೆ ಕೂರುವಂತಿಲ್ಲ. ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲೇಬೇಕು. ಪ್ರತಿ ಗ್ರಾಮ, ವಾರ್ಡ್​ಗಳಲ್ಲಿ ಕಮಿಟಿ ರಚನೆಯಾಗಬೇಕು. ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆಯಾಗಬೇಕು ಎಂದು ಕರೆ ನೀಡಿದರು.

ಸಂವಿಧಾನ ಎಂದರೆ ಕೇವಲ ಪೇಪರ್ ಅಲ್ಲ. ಎಲ್ಲ ಜನ, ಸಮುದಾಯಕ್ಕೆ ಸ್ಚಾತಂತ್ರ ಕೊಟ್ಟಿರುವುದು ಸಂವಿಧಾನ. ಕೇಂದ್ರದಲ್ಲಿ ಎಲ್ಲ ಪ್ರಮುಖ ಸ್ಥಾನ ಮೇಲ್ವರ್ಗಕ್ಕಿದೆ. ಜನರಲ್ ಕೆಟಗರಿ ಐಎಎಸ್ ಇದ್ದಾರೆ. ಆರ್​ಎಸ್​​ಎಸ್​ನವರು ಸೆಕ್ರೆಟರಿಗಳಾಗಿದ್ದಾರೆ. ಪ್ರಮುಖ ಸ್ಥಾನಗಳು ಎಸ್ಸಿ ಎಸ್ಟಿ, ಒಬಿಸಿಗೆ ಸಿಗ್ತಿಲ್ಲ. ಖಾಸಗಿಯಲ್ಲೂ ಈ ಸಮುದಾಯಗಳಿಗೆ ಬೆಲೆ ಇಲ್ಲ. ಖಾಸಗಿ ವಲಯದಲ್ಲಿ ಅದಾನಿ ಅಂತವರಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲಿ ಸಿಗ್ತಿದೆ. ಬಿಜೆಪಿ ಸರ್ಕಾರದಲ್ಲಿ ಎಸ್​​ಸಿ ಮತ್ತು ಒಬಿಸಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಕಟ್ ಮಾಡಿದ್ದಾರೆ. ಮನುಸ್ಮೃತಿಯನ್ನು ಎಲ್ಲೆಡೆ ತರ್ತಿದ್ದಾರೆ ಎಂದು ಕಿಡಿ ಕಾರಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಉಪಚುನಾವಣೆಯಲ್ಲಿನ ಪಕ್ಷದ ಗೆಲುವಿನ ಶ್ರೇಯಸ್ಸು ಯಾವುದ ವ್ಯಕ್ತಿಗೆ ಸಲ್ಲಬಾರದು. ಸಚಿವರು ಮತ್ತು ಕಾರ್ಯಕರ್ತರು ಸೇರಿದಂತ ಇಡೀ ನಾಯಕತ್ವಕ್ಕೆ ಸಲ್ಲಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT