ವಿಜಯೇಂದ್ರ - ಸುಧಾಕರ್ 
ರಾಜಕೀಯ

ಜಿಲ್ಲಾಧ್ಯಕ್ಷ ನೇಮಕದಲ್ಲಿ ನನ್ನ ಪಾತ್ರವಿಲ್ಲ, ನನ್ನ ಬಗ್ಗೆ ಹಗುರವಾಗಿ ಮಾತನಾಡದಿರಿ: ಸುಧಾಕರ್'ಗೆ ವಿಜಯೇಂದ್ರ ತಿರುಗೇಟು

ಚುನಾವಣೆ ಪ್ರಕ್ರಿಯೆ ಹೇಗೆ ನಡೆದಿದೆ ಎನ್ನುವುದನ್ನು ಹಿರಿಯರಿಗೆ ತಿಳಿಸಲು ಇಚ್ಚಿಸ್ತೇನೆ. ನಾನು ಯಾವುದೇ ಅಭಿಪ್ರಾಯ ಕೊಟ್ಟಿಲ್ಲ. ಪಕ್ಷದ ವರಿಷ್ಠರು ನನ್ನ ಅಭಿಪ್ರಾಯವನ್ನೂ ಸಹ ಕೇಳಿಲ್ಲ.

ಬೆಂಗಳೂರು: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ, ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಂಸದ ಸುಧಾಕರ್ ಅವರಿಗೆ ಗುರುವಾರ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 23 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ವಿರೋಧ ವಿಚಾರವಾಗಿ ಕೆಲವರು ಅಸಮಾಧಾನ ಹೊರಹಾಕಿರಬಹುದು. ಅದನ್ನು ನಾನು ತಪ್ಪು ಎನ್ನುವುದಿಲ್ಲ. ಚುನಾವಣೆ ಪ್ರಕ್ರಿಯೆ ಹೇಗೆ ನಡೆದಿದೆ ಎನ್ನುವುದನ್ನು ಹಿರಿಯರಿಗೆ ತಿಳಿಸಲು ಇಚ್ಚಿಸ್ತೇನೆ. ನಾನು ಯಾವುದೇ ಅಭಿಪ್ರಾಯ ಕೊಟ್ಟಿಲ್ಲ. ಪಕ್ಷದ ವರಿಷ್ಠರು ನನ್ನ ಅಭಿಪ್ರಾಯವನ್ನೂ ಸಹ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ರಾಜ್ಯಾಧ್ಯಕ್ಷನಾಗಿ ಯಾವುದೇ ಜಿಲ್ಲೆಯ ಜಿಲ್ಲಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ರಾಜ್ಯದ ಅಧ್ಯಕ್ಷನಾಗಿ ಯಾವುದೇ ಜಿಲ್ಲೆಯ ಚುನಾವಣೆ ಸಂಬಂಧ ಅಭಿಪ್ರಾಯ ಕೊಟ್ಟಿಲ್ಲ, ಕೊಡುವುದಕ್ಕೆ ಅವಕಾಶವೂ ಇಲ್ಲ. ಕೇಂದ್ರದಿಂದ ನಮ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಚುನಾವಣೆಯ ಜವಾಬ್ದಾರಿ ಕೊಟ್ಟಿದ್ದಾರೆ. 13 ಜನ ವೀಕ್ಷಕರನ್ನು ಕೂಡ ನೇಮಕ ಮಾಡಿದ್ದರು. ಪ್ರತಿಯೊಬ್ಬ ವೀಕ್ಷಕರಿಗೂ ಕೂಡ ಮೂರು-ಮೂರು ಜಿಲ್ಲೆಗಳ ಜವಾಬ್ದಾರಿ ಕೂಡ ನೀಡಲಾಗಿತ್ತು.

ಪ್ರತಿ ಜಿಲ್ಲೆಗೂ ಚುನಾವಣಾಧಿಕಾರಿ, ರಿಟರ್ನಿಂಗ್ ಆಫೀಸರ್, ಕೋರಿಟರ್ನಿಂಗ್ ಆಫೀಸರ್ ಕೂಡ ನೇಮಕಾತಿ ಆಗಿದೆ. ಅವರ ಸಮಕ್ಷಮದಲ್ಲಿ ಆಯಾ ಜಿಲ್ಲೆಗಳಲ್ಲಿ ಎಲ್ಲ ಪ್ರಮುಖರ ವಿಶ್ವಾಸಕ್ಕೆ ತೆಗೆದುಕೊಂಡು 3 ಹೆಸರುಗಳನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಜಿಲ್ಲೆಯ ತಂಡದಿಂದ ಕಳುಹಿಸಿದ 3 ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಿಕೊಟ್ಟು ಅಲ್ಲಿಂದ ಅಂತಿಮ ತೀರ್ಮಾನವಾದ ಬಳಿಕ ಚುನಾವಣಾ ಪ್ರಕ್ರಿಯೆ ನಡೆದಿದೆ. ಅಧ್ಯಕ್ಷರ ಹೆಸರುಗಳ ಘೋಷಣೆಯಾಗಿದೆ ಎಂದು ಹೇಳಿದರು.

ಈ ಪ್ರಕ್ರಿಯೆಯಲ್ಲಿ ವಿಜಯೇಂದ್ರ ಪಾತ್ರವೇನೂ ಇಲ್ಲ. ನಾನು ರಾಜ್ಯದ ಅಧ್ಯಕ್ಷನಾಗಿದ್ದರೂ ನನ್ನ ಜಿಲ್ಲೆಯ ಬಗ್ಗೆ ಅಭಿಪ್ರಾಯ ಕೊಡಬಹುದೇ ಹೊರತು ಬೇರೆ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಭಿಪ್ರಾಯ ಕೊಡುವಂತಿಲ್ಲ. ನನಗೂ ಆ ಅಧಿಕಾರವಿಲ್ಲ. ನಾನು ಯಾರನ್ನೂ, ಸುಧಾಕರ್ ಅವರನ್ನು ಕೂಡ ದೂಷಿಸುವುದಿಲ್ಲ. ಈ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅವರಿಗೆ ಗೊಂದಲವಿದೆ. ಇಡೀ ದೇಶದಲ್ಲಿ ಪಕ್ಷದ ಸಂಘಟನಾತಕ ಚುನಾವಣೆ ಇದೇ ರೀತಿಯಲ್ಲಿ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಹಾಗೆಯೇ ನಡೆದಿದೆ. ಹೊಸದಾಗಿ ಯಾವುದೇ ಪ್ರಕ್ರಿಯೆ ಮಾಡಲು ನನಗೆ ಅಧಿಕಾರವಿಲ್ಲ. ಕೇಂದ್ರ ಎಲ್ಲವನ್ನೂ ಗಮನಿಸುತ್ತಿದೆ ಎಂದು ತಿಳಿಸಿದರು.

ಸುಧಾಕರ್ ಅವರ ಆಕ್ರೋಶಭರಿತ ಮಾತುಗಳನ್ನು ನಾನು ಕೇಳಿದ್ದೇನೆ. ವಿಜಯೇಂದ್ರ ಅವರು ನಮನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ಈ ರೀತಿ ಹೇಳಿಕೆಗಳನ್ನು ದಯವಿಟ್ಟು ಕೊಡಬೇಡಿ. ಅದು ನಿಮಗೂ, ನನಗೂ ಗೌರವ ತರುವುದಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ಸುಧಾಕರ್ ಅವರು ಅರ್ಥ ಮಾಡಿಕೊಳ್ಳಲಿ. ಅವರು ಏನೇ ಟೀಕೆ ಮಾಡಿದರೂ ನಾನು ಟೀಕಿಸಲು ಹೋಗುವುದಿಲ್ಲ. ಮಾಜಿ ಸಚಿವರಾಗಿ ಅವರಿಗೂ ಸಹ ಜವಾಬ್ದಾರಿಗಳಿವೆ. ಪಕ್ಷ ಏನು ತೀರ್ಮಾನ ಮಾಡಿದೆಯೋ ಅದಕ್ಕೆ ಕೇಂದ್ರದ ಸಮ್ಮತಿ ಕೂಡ ಇದೆ. ಅದರಲ್ಲಿ ಯಾರೂ ಮೂಗು ತೂರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದ್ದಾರೆ. ತಪ್ಪುಗಳಿದ್ದರೆ ತಿದ್ದಿಕೊಳ್ಳಲು ನಾನು ಸಿದ್ಧ. ಸುಧಾಕರ್ ಅವರನ್ನು ಭೇಟಿ ಮಾಡುತ್ತೇನೆ. ನಾನೂ ಸಹ ತಿದ್ದಿಕೊಳ್ಳುತ್ತೇನೆ. ನಾನೊಬ್ಬ ರಾಜ್ಯದ ಅಧ್ಯಕ್ಷ. ಇದು ಮಂತ್ರಿಸ್ಥಾನ ಅಲ್ಲ. ಮನೆ, ಮಠ ಬಿಟ್ಟು ಕೆಲಸ ಮಾಡುತ್ತಿದ್ದೇನೆ. ಪಕ್ಷ ಅವರ ಸ್ವತ್ತೂ ಅಲ್ಲ, ನನ್ನ ಸ್ವತ್ತೂ ಅಲ್ಲ. ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕೋಸ್ಕರ ದುಡಿಯುತ್ತಿದ್ದಾರೆ. ಹಾಗಾಗಿ ಪಕ್ಷ ನನ್ನ ಸ್ವತ್ತು, ನಾನು ಮುಂದೆ ಮುಖ್ಯಮಂತ್ರಿ ಆಗಬೇಕು ಎನ್ನುವ ಯೋಚನೆ ತಲೆಯಲ್ಲಿಟ್ಟುಕೊಂಡು ನಾನು ಪಕ್ಷ ಸಂಘಟನೆ ಮಾಡುತ್ತಿಲ್ಲ. ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಖಂಡಿತ ಆ ರೀತಿ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.

ಸಚಿವರಾಗಿ ಅವರು ಪಕ್ಷ ಸಂಘಟನೆ ಮಾಡಿದ್ದಾರೆ. ನಾನು ಕೋರ್ ಕಮಿಟಿ ಸಭೆಯ ನಂತರ ಅವರ ಹತ್ತಿರ ಮಾತನಾಡಿದ್ದೇನೆ. ಮಾಧ್ಯಮಗಳಲ್ಲಿ ವರದಿ ಬಂದಾಗ ರಾಜ್ಯದ ಅಧ್ಯಕ್ಷನಾಗಿ ಅವರ ಜತೆಗೆ ಮಾತನಾಡುವುದು ನನ್ನ ಕರ್ತವ್ಯ. ಮಾಧ್ಯಮದ ಮುಂದೆ ಅವರು ಚರ್ಚೆ ಮಾಡಬಾರದಿತ್ತು. ಏನೇ ಭಿನ್ನಾಭಿಪ್ರಾಯ ಇದ್ದರೂ ಹಿರಿಯರ ಜತೆಗೆ ಕೂತು ಬಗೆಹರಿಸಿಕೊಳ್ಳೋಣ ಎಂದು ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT