ನವದೆಹಲಿ/ಬೆಂಗಳೂರು: 5 ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಪುನರುಚ್ಚರಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಗೂ ಮುನ್ನ ಖಾಸಗಿ ಸುದ್ದಿವಾನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆ. ಈ ವಿಚಾರವನ್ನು ನಾನು ಈಗಾಗಲೇ ಸ್ಪಷ್ಟಪಡಿಸಿದ್ದು ಜುಲೈ 2 ರಂದೇ ಈ ಹೇಳಿಕೆಯನ್ನು ನೀಡಿದ್ದೇನೆ. ಆ ದಿನ ಡಿಕೆ ಶಿವಕುಮಾರ್ ಕೂಡ ಅಲ್ಲಿದ್ದರು ಎಂದು ಹೇಳಿದರು.
ಎರಡೂವರೆ ವರ್ಷದ ಬಳಿಕ ಯಾವುದೇ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ. ನಾನೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಮ್ಮದು ಹೈಕಮಾಂಡ್ ಅಧಾರಿತ ಪಕ್ಷ. 2023ರ ಸಭೆಯಲ್ಲಿ ಎರಡೂವರೆ ವರ್ಷಗಳ ಅಧಿಕಾರಿ ಹಂಚಿಕೆಯ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ನಾವು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಅನುಸರಿಸಬೇಕೆಂದು ಹೈಕಮಾಂಡ್ ಹೇಳಿತ್ತು. ಅವರು ಏನೇ ಹೇಳಿದರೂ, ನಾವು ಅದನ್ನು ಅನುಸರಿಸಬೇಕು. ನಾನು ಅನುಸರಿಸುತ್ತೇನೆ, ಮತ್ತು ಡಿಕೆ ಶಿವಕುಮಾರ್ ಕೂಡ ಅನುಸರಿಸುತ್ತಾರೆ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಕುರ್ಚಿ ಈಗ ಖಾಲಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆಂದು ಹೇಳಿದರು.
ನಾಯಕತ್ವಕ್ಕೆ ಸಂಬಂಧಿಸಿದಂತೆ, ಸುರ್ಜೇವಾಲಾ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸುವ ಕೆಲವು ಶಾಸಕರು ಯಾವಾಗಲೂ ಇರುತ್ತಾರೆ, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ ಎಂದರು.