ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬೆಂಗಳೂರಿನಲ್ಲಿ ಶಾಸಕರು ಹಾಗೂ ಸಚಿವರುಗಳ ಜತೆ ಸರಣಿ ಸಭೆಗಳನ್ನು ನಡೆಸಿರುವುದನ್ನು ಟೀಕಿಸಿರುವ ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿಯಾಗಿದೆಯೇ ಎಂದು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಟ್ಸ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಲಾಟರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡು ಕರ್ನಾಟಕದಲ್ಲಿ ರಣದೀಪ್ ಆಡಳಿತ ಹೇರಿದೆ, ನಾಳೆ ನಡೆಯುವ ಸಂಪುಟ ಸಭೆಯೂ ಸುರ್ಜೇವಾಲಾ ಅಧ್ಯಕ್ಷತೆಯಲ್ಲಿ ನಡೆಯುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ ಅತೃಪ್ತ ಶಾಸಕರು ದೂರು ದುಮ್ಮಾನ ಕೇಳುತ್ತಿರುವ, ಮಂತ್ರಿಗಳ ಸಾಧನೆ ಪರಾಮರ್ಶೆ ಮಾಡುತ್ತಿರುವ ಸುರ್ಜೇವಾಲ ಅವರು ನಾಳೆ ವಿಧಾನಸೌಧದಲ್ಲಿ ನಡೆಯುವ ಸಂಪುಟ ಸಭೆಗೆ ಬಂದು ತಾವೇ ಅಧ್ಯಕ್ಷತೆ ವಹಿಸಿದ್ದರೂ ಅಚ್ಚರಿಪಡಬೇಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತವಿಲ್ಲ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಶಾಸಕರ ಬೆಂಬಲ ಇಲ್ಲ. ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಆಗಿ ನೇಮಕ ಮಾಡಲು ರಾಹುಲ್‌ಗಾಂಧಿ ಅವರಿಗೂ ಶಕ್ತಿ ಇಲ್ಲ ಎಂದು ಟೀಕಿಸಿದ್ದಾರೆ. ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನವನ್ನ ಸಮರ್ಥವಾಗಿ ನಿಭಾಯಿಸಬಲ್ಲ ಒಬ್ಬ ನಾಯಕನೂ ಇಲ್ಲದೆ ಕಾಂಗ್ರೆಸ್ ಹೈಕಮಾಂಡ್ ತ್ರಿಶಂಕು ಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಸುರ್ಜೇವಾಲಾ ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಸುರ್ಜೇವಾಲ ಅಭಿನಂದನೆಗಳು. ಚುನಾಯಿತ ಮುಖ್ಯಮಂತ್ರಿಗಳು ಸರಕಾರ ನಡೆಸಲು ಅವರಿಗೆ ಜಿಪಿಎ ನೀಡಿದ್ದಾರೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ. ಸಿದ್ದರಾಮಯ್ಯ ಹೊರಹೋಗುತ್ತಿದ್ದಾರೆ, ಡಿ.ಕೆ ಶಿವಕುಮಾರ್ ಅವರು ಕುರ್ಚಿಗಾಗಿ ಕಾಯುತ್ತಿದಾರೆ, ಆದರೆ ಸುರ್ಜೇವಾಲ ಈಗಾಗಲೇ ಆಡಳಿತ ನಡೆಸುತ್ತಿದ್ದಾರೆ. ಪಕ್ಷ ಕರ್ನಾಟಕವನ್ನು ಕೈಗೊಂಬೆ ರಾಜ್ಯವನ್ನಾಗಿ ಮಾಡಿಕೊಂಡು ಒಕ್ಕೂಟ ವ್ಯವಸ್ಥೆಯ ಮತ್ತು ಪ್ರಜಾಪ್ರಭುತ್ವವನ್ನು ಅಣಕ ಮಾಡುತ್ತಿದೆ ಎಂದಿದ್ದಾರೆ.