ಕೊಪ್ಪಳ: ಸಂಡೂರು ಉಪಚುನಾವಣೆಯ ಫಲಿತಾಂಶದ ಬಳಿಕ ಪರಸ್ಪರ ಟೀಕಾಪ್ರಹಾರಗಳಲ್ಲಿ ತೊಡಗಿ ಮುನಿಸಿಕೊಂಡಿದ್ದ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರು, ವೈಮನಸ್ಸು ಬದಿಗೊತ್ತಿ ಮತ್ತೆ ಒಂದಾಗಿದ್ದಾರೆ.
ತಾಲ್ಲೂಕಿನ ಮರಳಿ ಗ್ರಾಮದ ಸಮೀಪದಲ್ಲಿ ಭಾನುವಾರ ನಡೆದ ಪಕ್ಷದ ಅವಲೋಕನಾ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರೂ ನಾಯಕರು ಕಾಣಿಸಿಕೊಂಡರು. ಈ ಮೂಲಕ ನಾವಿಬ್ಬರೂ ದೂರಾಗದ ಸ್ನೇಹಿತರು ಎಂಬ ಸಂದೇಶವನ್ನು ಸಾರಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 11 ವರ್ಷಗಳಾಗಿದ್ದರಿಂದ ಅವರ ಸಾಧನೆ ತಿಳಿಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು.
ವಿಜಯೇಂದ್ರ ಅವರಿಬ್ಬರ ಕೈಗಳನ್ನೂ ಎತ್ತಿ ಹಿಡಿದು ಮುನಿಸು ಮರೆಯುವಂತೆ ಮಾಡಿದರು. ಕಾರ್ಯಕ್ರಮದಲ್ಲಿ ರೆಡ್ಡಿ ಮತ್ತು ಶ್ರೀರಾಮುಲು ಅಕ್ಕಪಕ್ಕದಲ್ಲಿಯೇ ಕುಳಿತರು.
ಬಳಿಕ ಮಾತನಾಡಿದ ವಿಜಯೇಂದ್ರ ಅವರು, ಪಕ್ಷವನ್ನು ಬೇರಿನಿಂದಲೇ ಗಟ್ಟಿಯಾಗಿ ನಿಲ್ಲುವಂತೆ ಮಾಡಲು ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಜನಾರ್ದನ ರೆಡ್ಡಿ ಮಾತನಾಡಿ ‘ನಮ್ಮ ನಡುವೆ ಮಧ್ಯಸ್ಥಿಕೆ ಮಾಡಲು ಯಾರಾದರೂ ಮುಂದಾದರೆ ಅವರಂಥ ಮೂರ್ಖರು ಯಾರೂ ಇಲ್ಲ. ನಮಗೆ ಸಂಧಾನದ ಅಗತ್ಯವಿಲ್ಲ. ನಮ್ಮದು ಸ್ನೇಹದ ಜಗಳ. ಇದರ ಲಾಭ ಪಡೆಯಲು ಪ್ರಯತ್ನಿಸಿದವರಿಗೆ ಏನೂ ಸಿಗುವುದಿಲ್ಲ. ಅದೊಂದು ಕೆಟ್ಟ ಘಳಿಗೆ. ನಾನು, ರಾಮುಲು ಮತ್ತು ವಿಜಯೇಂದ್ರ ಓಡಾಡಿ ನಮ್ಮ ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂದರು.
ಶ್ರೀರಾಮುಲು ಮಾತನಾಡಿ ಪಕ್ಷದ ವಿಚಾರ ಬಂದಾಗ ನಾವು ಮಾದರಿಯಾಗಬೇಕು. ಕಾಂಗ್ರೆಸ್ಸಿಗರ ರೀತಿಯಲ್ಲಿ ಹರಕೆಯ ಕುರಿ ಆಗಬಾರದು. ಪಕ್ಷ ಸಂಘಟನೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಜನಾರ್ದನ ರೆಡ್ಡಿ ಜೊತೆ ಯಾವುದೇ ಮುನಿಸು ಇಲ್ಲ’ ಎಂದು ಹೇಳಿದರು.
ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಒಂದಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ ಮತ್ತು ವಿಜಯನಗರದ ಬಿಜೆಪಿ ಕಾರ್ಯಕರ್ತರು ಸಂತೋಷವನ್ನು ವ್ಯಕ್ತಪಡಿಸಿದ್ದು, ಪಕ್ಷವನ್ನು ನಿರ್ಮಿಸುವಲ್ಲಿ ಒಗ್ಗೂಡಿ, ಸಕ್ರಿಯವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.