ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಆಂತರಿಕ ಸಂಘರ್ಷವು ರಾಜ್ಯದಲ್ಲಿ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಭಾನುವಾ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಪಕ್ಷದೊಳಗೆ ಆಂತರಿಕ ಗುದ್ದಾಟ ನಡೆಯುತ್ತಿದೆ. ಡಿಸಿಎಂ ಶಿವಕುಮಾರ್ ಸಿಎಂ ಸ್ಥಾನ ಪಡೆಯಲು ದೊಡ್ಡ ಪ್ರಯತ್ನ ಮಾಡುತ್ತಿದ್ದರೆ, ಸಿದ್ದರಾಮಯ್ಯ ಕುರ್ಚಿ ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಖುರ್ಚಿ ಕಳೆದುಕೊಳ್ಳುವ ಅಭದ್ರತೆ ಕಾಡುತ್ತಿದ್ದು, ಡಿಸಿಎಂ ಶಿವಕುಮಾರ್ ಅವರಿಗೆ ಅವಕಾಶದಿಂದ ವಂಚಿತವಾಗುತ್ತೇನೆ ಎಂಬ ಅನುಮಾನ ಕಾಡುತ್ತಿದೆ. ಹೈಕಮಾಂಡ್ ಮಾತು ಕೊಟ್ಟ ರೀತಿಯಲ್ಲಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿಲ್ಲ ಎಂಬ ಅನುಮಾನವೂ ಬಂದಿದೆ. ಇದರಿಂದಾಗಿ ಸರ್ಕಾರ ಯಾವುದೇ ಕಾರಣಕ್ಕೂ ಐದು ವರ್ಷಗಳ ಕಾಲ ಪೂರ್ಣಾವಧಿ ಮಾಡಲ್ಲ. ಯಾವುದೇ ಸಮಯದಲ್ಲಾದರೂ ಸರ್ಕಾರ ಬೀಳಬಹುದು ಭವಿಷ್ಯ ನುಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಜವಾಬ್ದಾರಿಗಳ ಮೇಲೆ ಗಮನಹರಿಸಬೇಕು ಎಂದು ಹೇಳಿದರು.