ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಜೂನ್ 27ರಿಂದ ತಿಂಗಳ ಕಾಲ ಆಷಾಢ ಶುಕ್ರವಾರ ಆಚರಣೆ ನಡೆಯಲಿದ್ದು, ಇದ ನಡುವೆ ವಿಶೇಷ ದರ್ಶನ’ಕ್ಕೆ 2,000 ರೂ. ಟಿಕೆಟ್ ಪರಿಚಯಿಸಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸಮಾಜವಾದಿ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಅತಿಯಾದ ಶುಲ್ಕ ವಿಧಿಸುವ ಮೂಲಕ ಹಿಂದೂ ಭಕ್ತರನ್ನು ಶೋಷಿಸುತ್ತಿದ್ದಾರೆಂದು ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಅವರು ಆರೋಪಿಸಿದ್ದಾರೆ.
ಬಂಟ್ವಾಳದಲ್ಲಿ ಉರುಸ್ ಆಚರಣೆಗೆ ರೂ.4 ಕೋಟಿ ಮೀಸಲಿಟ್ಟು, ಅಲ್ಪಸಂಖ್ಯಾತರನ್ನು ಓಲೈಸುವುದನ್ನು ಮುಂದುವರೆಸಿರುವ ಸರ್ಕಾರ, ಹಿಂದೂಗಳನ್ನು ಶೋಷಿಸುತ್ತಿದೆ. ಸರ್ಕಾರ ದಿವಾಳಿಯಾಗಿದ್ದು, ಈ ಶುಲ್ಕದ ಮೂಲಕ ಹಣ ಸಂಗ್ರಹಿಸಲು ಯತ್ನಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿದ್ದಾರೆ.
ದಸರಾ ಆಚರಣೆಗೆ ರೂ.41.7 ಕೋಟಿ ಖರ್ಚು ಮಾಡಿರುವುದಾಗಿ ಸರ್ಕಾರ ಹೇಳಿದೆ. ಈ ಬಗ್ಗೆ ವಿವರ ಬಿಡುಗಡೆ ಮಾಡಲು ಜಿಲ್ಲಾಳಿತ ಮಂಡಳಿ 10 ತಿಂಗಳು ಸಮಯ ತೆಗೆದುಕೊಂಡಿದೆ. ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಸಾಮಾಜಿಕ-ಆರ್ಥಿಕ ಮರು ಸಮೀಕ್ಷೆಯನ್ನು ಘೋಷಿಸುವ ಮೂಲಕ ಹಿಂದುಳಿದ ಸಮುದಾಯಗಳಿಗೆ ದ್ರೋಹ ಮಾಡಿದ್ದಾರೆಂದೂ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಜನರಿಗೆ ಪದೇ ಪದೇ "ವಂಚಿಸಿದ್ದಾರೆ. ಹಿಂದೆ ಸಮೀಕ್ಷೆಗೆ ಖರ್ಚು ಮಾಡಿದ 165 ಕೋಟಿ ರೂಪಾಯಿ ಸಾರ್ವಜನಿಕ ಹಣ ವ್ಯರ್ಥವಾಗಿದ್ದು, ಅದನ್ನು ಸಿದ್ದರಾಮಯ್ಯ ಅವರು ಮರುಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವು ಜನಗಣತಿ ಅಧಿಕಾರವನ್ನು ಹೊಂದಿರುವುದರಿಂದ, ಜಾತಿ ಜನಗಣತಿ ನಡೆಸುವ ಅಧಿಕಾರ ರಾಜ್ಯಕ್ಕೆ ಇಲ್ಲ. ಸಿದ್ದರಾಮಯ್ಯ ಅವರು ತೊಂದರೆಯಲ್ಲಿ ಸಿಲುಕಿದಾಗಲೆಲ್ಲಾ ಹಿಂದುಳಿದ ವರ್ಗಗಳು ಅಥವಾ ಜಾತಿ ಜನಗಣತಿಗೆ ಸಂಬಂಧಿಸಿದ ವಿಷಯಗಳನ್ನು ಎತ್ತುತ್ತಿದ್ದಾರೆಂದೂ ಆಱೋಪಿಸಿದ್ದಾರೆ.