ಬೆಂಗಳೂರು: ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ವಿಧಾನಸೌಧಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಂಸದ ಸುಧಾಕರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಯಲು ಸೀಮೆಯ ಮೂರು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಕ್ಷೆಯಲ್ಲಿಲ್ಲ. ಈ ಮೂರು ಜಿಲ್ಲೆಗಳೂ ನಮ್ಮ ರಾಜ್ಯದ ಭಾಗವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಎತ್ತಿನಹೊಳೆ ಯೋಜನೆ, ಕೆ.ಸಿ ವ್ಯಾಲಿ, ಎಚ್.ಎನ್.ವ್ಯಾಲಿ ನೀರಿನ 3 ಹಂತದ ಶುದ್ದೀಕರಣ ಸೇರಿದಂತೆ ಹಲವು ಯೋಜನೆಗಳ ಕಾರ್ಯಗತದ ಬಗ್ಗೆ ನಿರೀಕ್ಷೆ ಇದ್ದವು. ಇದೀಗ ಏಕಾಏಕಿ ಸಭೆ ಸ್ಥಳಾಂತರಿಸಿರುವುದು ಬೇಸರಕ್ಕೆ ಕಾರಣವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಗ್ಗೆ ಈ ಸರ್ಕಾರ ನಿರ್ಲಕ್ಷ್ಯವನ್ನು ತೋರುತ್ತಿದೆ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಅರಸೀಕೆರೆ ಮತ್ತು ಭಕ್ತರಹಳ್ಳಿಯ ಕೆಳಭಾಗದಲ್ಲಿ ಹೊಸ ಕೆರೆ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡುವುದು ಸೇರಿದಂತೆ ಹಲವಾರು ವಿಷಯಗಳು ನಂದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿದ್ದವು. ಶಿಡ್ಲಘಟ್ಟ ತಾಲ್ಲೂಕಿನ 45 ಕೆರೆಗಳು ಮತ್ತು ಚಿಂತಾಮಣಿ ತಾಲ್ಲೂಕಿನ 119 ಕೆರೆಗಳು ಸೇರಿದಂತೆ 164 ಕೆರೆಗಳಿಗೆ ಶಿಡ್ಲಘಟ್ಟ ಅಮಾನಿಕೆರೆಯ ನೀರಿನಿಂದ ಬೆಂಗಳೂರು ನಗರದ ಹೆಬ್ಬಾಳದ ನಾಗವಾರ ಕಣಿವೆಯ ಎರಡನೇ ಹಂತದ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ನೀರು ತುಂಬಿಸಲು 237.10 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡುವ ನಿರೀಕ್ಷೆಯಿತ್ತು. ಬಾಗೇಪಲ್ಲಿಯ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವ ನಿರ್ಧಾರವೂ ಕಾರ್ಯಸೂಚಿಯಲ್ಲಿತ್ತು.
ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 15 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳು ಕಾಂಗ್ರೆಸ್ ಪ್ರತಿನಿಧಿಸಲ್ಪಡುತ್ತವೆ. ಇದನ್ನು ಪರಿಗಣಿಸಿಯಾದರೂ ಸರ್ಕಾರ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.