ರಾಮನಗರ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುವುದು 200% ಸತ್ಯ ಎಂದು ಅವರ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಡಿಕೆಶಿ ಮುಂದಿನ ಸಿಎಂ ಆಗೋದು 200% ಸತ್ಯ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ರಚಿಸುತ್ತದೆ ಎಂದು ಹೇಳಿದರು.
ಆದರೆ ಕಾಂಗ್ರೆಸ್ ಎಂಎಲ್ಸಿ ನಾಗರಾಜ್ ಯಾದವ್, ಹುಸೇನ್ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಮುಂದಿನ ಬಾರಿ ಅಂದ್ರೆ ಏನು ಅರ್ಥ? ಸಿದ್ದರಾಮಯ್ಯ ಈಗ ಹಾಲಿ ಸಿಎಂ ಆಗಿದ್ದಾರೆ. ಹೈಕಮಾಂಡ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದರು.
ಡಿಕೆ ಶಿವಕುಮಾರ್ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಕೂಡಾ ಪಕ್ಷದ ಬೆಳವಣಿಗೆಯಲ್ಲಿ ಅಪಾರ ಶ್ರಮಿಸಿದ್ದಾರೆ ಎಂದರು. ಇಂತಹವರೇ ಸಿಎಂ ಆಗ್ತಾರೆ ಅಂತಾ ನಿರ್ಧರಿಸುವುದು ಇಕ್ಬಾಲ್ ಹುಸೇನ್ ಗೆ ಆಗಲೀ ಅಥವಾ ನನ್ನಗಾಗಲಿ ಇಲ್ಲ ಎಂದರು.
ಮುಂದಿನ ಸಿಎಂ ಯಾರಾಗ್ತಾರೆ ಎಂಬುದನ್ನು ಹೈಕಮಾಂಡ್ ನಿರ್ಧರಿಸಿದೆ. 2028ರಲ್ಲಿಯೂ ಕೋಮುಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನಾಗರಾಜ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.