ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಣ ಪಡೆದು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಆರೋಪಿಸಿದ್ದಾರೆ.
ಗುರುವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ ರೇಣುಕಾಚಾರ್ಯ ಅವರು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದರು. ಬಿಜೆಪಿ ಟಿಕೆಟ್ ತಮ್ಮವರಿಗೆ ಕೈ ತಪ್ಪಿದ್ದಕ್ಕೆ ಪಕ್ಷ ನಿಷ್ಠೆ ಮರೆತು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಸಮಯ ಬಂದಾಗ ಬಹಿರಂಗಪಡಿಸುವೆ ಎಂದರು.
ರೇಣುಕಾಚಾರ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಬಿಜೆಪಿ ಬಿಟ್ಟು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರೂ ಅಗಿರುವ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮನೆ ಬಾಗಿಲಿಗೂ ಬಂದಿದ್ದರು. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ನಿರ್ಧಾರ ಬದಲಿಸಿದರು ಎಂದು ಆರೋಪ ಮಾಡಿದರು.
ರೇಣುಕಾಚಾರ್ಯ ಅವರು ನಾನು ಇಸ್ಟಿಟ್ ಕ್ಲಬ್ ನಡೆಸುತ್ತೇನೆ. ಕ್ಯಾಶಿನೋ ನಡೆಸುತ್ತೇನೆ, ಐಪಿಎಲ್ ಬೆಟ್ಟಿಂಗ್ ನಡೆಸುತ್ತೇನೆ ಎಂದೆಲ್ಲ ಆರೋಪ ಮಾಡಿದ್ದಾರೆ. ಇವೆಲ್ಲವೂ ಸುಳ್ಳು. ಇದರ ಬಗ್ಗೆ ಅವರು ಒಂದೇ ಒಂದು ಸಾಕ್ಷ್ಯ ಇದ್ದರೂ ತೋರಿಸಲಿ. ನಾನು ಅವರ ಮನೆ ಬಾಗಿಲಿಗೆ ಹೋಗಿ ನಿಲ್ಲಲು ಸಿದ್ಧ. ನಾನು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸವಾಲೆಸೆದರು.