ಉಡುಪಿ: ರಾಜ್ಯದಲ್ಲಿ ಸೋತ ಸ್ಥಾನಗಳಿಗೆ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭಾನುವಾರ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ವೈಫಲ್ಯಕ್ಕೆ ಕಾರಣಗಳ ಬಗ್ಗೆ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಲಾಗಿದ್ದು, ಹೆಚ್ಚುವರಿ ಪ್ರಯತ್ನ ಮಾಡಿದರೆ ಪಕ್ಷವು ಕನಿಷ್ಠ 60 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಕ್ಷವು ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲಬಹುದು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.
ಚುನಾವಣೆಯಲ್ಲಿ ಗೆಲ್ಲಲು ನಮಗೆ ಎಲ್ಲಾ ವರ್ಗದ ಮತದಾರರು ಬೇಕು. ಪ್ರಚಾರದ ಸಮಯದಲ್ಲಿ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಮುಂದಿನ ಎರಡು ವರ್ಷಗಳ ಕಾಲ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ. ಪಕ್ಷಕ್ಕೆ ಕಚೇರಿಗಳಿಲ್ಲದ ಸ್ಥಳಗಳನ್ನು ಗುರುತಿಸಿ, ಅಲ್ಲಿ ಕಚೇರಿಗಳನ್ನು ನಿರ್ಮಿಸಿ ಹೇಳಿದರು.
ಬಳಿಕ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ 14 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರದ ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ನ್ಯಾಯಕ್ಕಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೂಡ ಡಿಕೆ.ಶಿವಕುಮಾರ್ ಅವರು ಭೇಚಿ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ. ನಿಮ್ಮ ಧ್ವನಿಗೆ ಸರಕಾರದ ಮನ್ನಣೆ ನೀಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆಂದು ಭರವಸೆ ನೀಡಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಸಮಸ್ಯೆ ಬಗ್ಗೆ ನನಗೂ ಅನುಭವವಿದೆ. ನಾನು ಸಹಕಾರ ಸಚಿವನಾಗಿದ್ದಾಗ ಆಸ್ಕರ್ ಫೆರ್ನಾಂಡೀಸ್ ಅವರು ಕಾರ್ಖಾನೆಯ ಅಧ್ಯಕ್ಷರಾಗಿದ್ದರು. ಕಾರ್ಖಾನೆಗೆ ಅವರು ಸರಕಾರದ ನೆರವನ್ನು ಬಯಸಿದ್ದರು. ಆಗ ನಾನು ಇಲ್ಲಿಗೆ ಬಂದಿದ್ದೆ. ಇಲ್ಲಿ 100 ಎಕರೆಗೂ ಅಧಿಕ ಬೆಳೆಬಾಳುವ ಜಾಗವಿದೆ. ಆಕಾಲದಲ್ಲಿ ಕಾರ್ಖಾನೆ ಸಿಬ್ಬಂದಿಗಳಿಗೆ ಹಣ ನೀಡಿ ಸಹಾಯ ಮಾಡಿದ್ದು ನನಗೆ ನೆನಪಿದೆ ಎಂದವರು ಅಂದಿನ ದಿನವನ್ನು ಸ್ಮರಿಸಿದರು.
ಇಲ್ಲಿ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು ಎಂದು ತೀರ್ಮಾನ ವಾಗಿದೆ. ಇಲ್ಲಿ ನಡೆದಿರುವ ಅಕ್ರಮ, ಅವ್ಯವಹಾರದ ವಿರುದ್ಧ ನೀವಿಗ ಹಗಲು-ರಾತ್ರಿ ಹೋರಾಟ ನಡೆಸುತಿದ್ದೀರಿ. ಈ ನಡುವೆ ಸರಕಾರ ಸಹ ಈ ಬಗ್ಗೆ ಆದೇಶ ಹೊರಡಿಸಲು ಮುಂದಾಗಿರುವ ಮಾಹಿತಿ ಇದೆ ಎಂದ ಉಪಮುಖ್ಯಮಂತ್ರಿಗಳು, ನಾಳೆಯಿಂದ ವಿಧಾನಮಂಡಲದ ಅಧಿವೇಶನ ಪ್ರಾರಂಭಗೊಳ್ಳಲಿದ್ದು, ಮಾ.8ರ ನಂತರ ಮೂರ್ನಾಲ್ಕು ಮಂದಿ ರೈತರ ನಿಯೋಗವೊಂದು ಬೆಂಗಳೂರಿಗೆ ಬಂದರೆ ಗೃಹಸಚಿವರು ಹಾಗೂ ಸಹಕಾರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಒಂದು ಸಭೆ ನಡೆಸೋಣ ಎಂದು ಸಲಹೆ ನೀಡಿದರು.
ನೀವು ನನಗೆ ನೀಡಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಗಮನಕ್ಕೆ ತರಲಾಗುವುದು. ಈ ಬಗ್ಗೆ ಸಭೆ ಕರೆದು ನಿಮಗೆ ಯಾವ ರೀತಿಯಲ್ಲಿ ನ್ಯಾಯ ಕೊಡಿಸಲು ಸಾಧ್ಯವೊ ಚರ್ಚೆ ಮಾಡೋಣ. ಅಧಿಕೃತ ಕಾರ್ಯಕ್ರಮ ವಿಲ್ಲದಿದ್ದರೂ ನಿಮ್ಮನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲು ಬಂದಿದ್ದೇನೆಂದು ಹೇಳಿದರು.
ನ್ಯಾಯ ಎಲ್ಲರಿಗೂ ಒಂದೇ. ನಿಮ್ಮ ಹೋರಾಟಕ್ಕೆ ನಾವು ಅಗತ್ಯ ಸಹಕಾರ ನೀಡುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಧಾನ ಪರಿಷತ್ ಸದಸ್ಯರಿಗೆ ನಾನು ಸೂಚನೆ ಕೊಡುತ್ತೇನೆ ಎಂದು ತಿಳಿಸಿದರು.