ಬೆಂಗಳೂರು: ರಾಜ್ಯ ಸರ್ಕಾರ ದಲಿತರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದು, ಇದರ ವಿರುದ್ಧ ಜನಾಂದೋಲನ ನಡೆಸಲು ತೀರ್ಮಾನಿಸಳಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ಬೆಂಗಳೂರಿನ ಶಾಸಕರ ಭವನದಲ್ಲಿ ಶನಿವಾರ ದಲಿತ ಸಂಘಟನೆಗಳ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ದಲಿತ ವಿರೋಧಿ ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ . ಸಿದ್ದರಾಮಯ್ಯ ದಲಿತರನ್ನು ಎತ್ತಿ ಕಟ್ಟಿ ದಲಿತರನ್ನು ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ದಲಿತರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವ ವಿರುದ್ದ ಹೋರಾಟ ಮಾಡಲಾಗುತ್ತದೆ. ದಲಿತ ಸಂಘಟನೆಗಳು ಇದಕ್ಕಾಗಿ 10 ತಂಡಗಳನ್ನು ರಚಿಸಲಿವೆ. ಇನ್ನೊಂದು ವಾರದ ಒಳಗೆ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ಪ್ರಕಟಿಸಿದರು.
ರಾಜ್ಯದೆಲ್ಲೆಡೆ ಪ್ರವಾಸದ ಬಳಿಕ ಬೆಂಗಳೂರಿನಲ್ಲಿ ಸಮುದಾಯದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ತೀರ್ಮಾನ ಮಾಡಲಾಗಿದೆ. ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.