ಮೈಸೂರು: ಕ್ಯಾತಮಾರನಹಳ್ಳಿ ಮಸೀದಿ ರೀ ಓಪನ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರೆಸಿಡೆನ್ಸಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮಸೀದಿಯನ್ನು ರೀ ಓಪನ್ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಾನೊಬ್ಬ ಬಿಜೆಪಿ ಕಾರ್ಯಕರ್ತನಾಗಿ ಸಿದ್ದರಾಮಯ್ಯ ಅವರಿಗೆ ಚಾಲೆಂಜ್ ಮಾಡಿ ಹೇಳುತ್ತೇನೆ. ತಾಕತ್ತಿದ್ದರೆ ಓಪನ್ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ.
ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯನ್ನು ಟೀಕೆ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರ ಧರ್ಮದ ಆಧಾರ ಮೇಲೆ ತೆರಿಗೆ ಸಂಗ್ರಹದ ವರದಿ ಸಿದ್ದ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೂಗಳು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ ಮುಸ್ಲಿಂಮರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಕ್ರಿಶ್ಚಿಯನ್ ರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ ? ಅದರ ವರದಿ ತಯಾರಿಸಿ ಬಿಡುಗಡೆ ಮಾಡಿ.
ರಾಜ್ಯ ಬಜೆಟ್ ಗೆ ಸಾಬರ ಕೊಡುಗೆ ಎಷ್ಟು ಎಂಬುದು ಜನರಿಗೆ ಗೊತ್ತಾಗಲಿ ಮಸೀದಿಯಿಂದ, ಚರ್ಚ್ ನಿಂದ ಸರಕಾರಕ್ಕೆ ಐದು ರೂಪಾಯಿ ಆದರೂ ತೆರಿಗೆ ಬರುತ್ತಿದೆಯಾ? ಇದು ಹಲಾಲ್ ಬಜೆಟ್ ಅನ್ನೋದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕಿಡಿಕಾರಿದ್ದಾರೆ.
ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣ, ಮಡಿವಾಳರ ಹೀಗೆ ನಾನಾ ಜಾತಿಯ ಅಭಿವೃದ್ಧಿ ನಿಗಮಕ್ಕೆ ಎಷ್ಟು ಹಣ ಕೊಟ್ಟಿದ್ದಿರಾ? ಆಜಾನ್ ಕೂಗುವವರಿಗೆ ಅರು ಸಾವಿರ ರು ಹಣ ಘೋಷಿಸಿದ್ದೀರಿ, ದೇವಾಲಯದಲ್ಲಿ ಕೆಲಸ ಮಾಡುವ ಅರ್ಚಕರಿಗೆ ಏಕೆ ಕಡಿಮೆ ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಡಿಸಿಎಂ ನಟು ಬೋಲ್ಟ್ ಹೇಳಿಕೆ ವಿಚಾರವಾಗಿಯೂ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಸಿಎಂ ತಾಲಿಬಾನ್ ಸರಕಾರ ನಡೆಸುತ್ತಿದ್ದಾರೆ. ಡಿಸಿಎಂ ಗೂಂಡಾ ಸರಕಾರ ನಡೆಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರೇ ಕರ್ನಾಟಕ ಏನೂ ನಿಮ್ಮ ರಿಯಲ್ ಎಸ್ಟೇಟ್ ಆಫೀಸ್ ಆಗಿದ್ಯಾ? ಮೇಕೆದಾಟು ಪಾದಯಾತ್ರೆ ಅದು ಕಾಂಗ್ರೆಸ್ ಜಾತ್ರೆ, ರಾಜಕೀಯಕ್ಕೆ ನೀವು ನಡೆಸಿದ ಯಾತ್ರೆ.
ಕಾಂಗ್ರೆಸ್ ಜಾತ್ರೆಗೆ ಬರಲು, ಕಾಂಗ್ರೆಸ್ ನಾಯಕರ ಫೋಟೋ ಇರುವ ಯಾತ್ರೆಯಲ್ಲಿ ಭಾಗವಹಿಸಲು ಸುದೀಪ್, ಶಿವಣ್ಣ, ಯಶ್ ಏನೂ ನಿಮ್ಮ ಪಾರ್ಟಿ ಸದಸ್ಯರಾ? ಎಂದು ಪ್ರಶ್ನೆ ಮಾಡಿದ್ದಾರೆ.