ಬೆಂಗಳೂರು: ಆಪರೇಷನ್ ಹಸ್ತ ಆರೋಪಗಳ ಕುರಿತಂತೆ ಮಾತನಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, 'ನಮ್ಮದೇ ಗಾಡಿ ಫುಲ್ ಆಗಿರುವಾಗ ಜೆಡಿಎಸ್ ನ 18 ಶಾಸಕರನ್ನು ತೆಗೆದುಕೊಂಡು ನಾವೇನು ಮಾಡೋಣ' ಎಂದು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಓವರ್ ಲೋಡೆಡ್ ಇದ್ದರೂ ನಮ್ಮದು ಕಾಂಗ್ರೆಸ್ ಪಕ್ಷವೇ. ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ 138 ಮಂದಿ ಶಾಸಕರಿದ್ದಾರೆ. ಇಲ್ಲಿಯೇ ಅಧ್ಯಕ್ಷ ಆಗಬೇಕು. ಇಲ್ಲಿಯೇ ಸಿಎಂ ಆಗಬೇಕು. ಸದ್ಯಕ್ಕೆ ವೇಯ್ಟಿಂಗ್ ಲಿಸ್ಟ್‌ನಲ್ಲಿ ಇದ್ದೇವೆ ಇಲ್ಲಿಯೇ ಕಾಯುತ್ತೇವೆ. ನಾನು ಆರ್‌ಎಸಿ ಟಿಕೆಟ್‌ನಲ್ಲಿದ್ದೇನೆ.
ಇಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿಯೇ ಕಾಯ್ತೇನೆ. ಯಾರಾದ್ರೂ ಮೆಜೆಸ್ಟಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡು ಬರುವುದು ತಡವಾದರೆ ನಮಗೆ ಅವಕಾಶ ಸಿಗಬಹುದು ಎಲ್ಲರೂ ಆರ್‌ಎಸಿ ಟಿಕೆಟ್ ಇಟ್ಟುಕೊಂಡೇ ಕಾಯ್ತಿದ್ದಾರೆ. ಇಲ್ಲಿ ಶಿಂಧೆ, ಅಜಿತ್ ಪವರ್ ಯಾರೂ ಇಲ್ಲ. ಆ ಸಾಮರ್ಥ್ಯ ಇಲ್ಲಿ ಯಾರಿಗೂ ಇಲ್ಲ' ಎಂದು ಹೇಳುವ ಮೂಲಕ ಬಂಡಾಯ ನಾಯಕರಿಗೂ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.
ದೆಹಲಿ ಭೇಟಿ
ದೆಹಲಿ ಭೇಟಿಯ ವೇಳೆ ಹನಿಟ್ರಾಪ್‌ಗೆ ಸಂಬಂಧಪಟ್ಟಂತೆ ಯಾವುದೇ ಚರ್ಚೆಗಳಾಗಿಲ್ಲ. ದೆಹಲಿಗೆ ಹೋಗಿ ರಾಜಕೀಯದ ದೂರುಗಳನ್ನು ನೀಡುವ ಅಗತ್ಯ ತಮಗಿಲ್ಲ ಎಂದ ಸತೀಶ್ ಜಾರಕಿಹೊಳಿ, ಜೆಡಿಎಸ್‌ನ ಕುಮಾರಸ್ವಾಮಿಯವರ ಸಹಕಾರದ ಪ್ರಶ್ನೆ ಉದ್ಭವಿಸುವುದಿಲ್ಲ. ಕುಮಾರಸ್ವಾಮಿ, ಸೋಮಣ್ಣ ಅವರಂತೆ ಪ್ರಹ್ಲಾದ್ ಜೋಷಿ ಅವರನ್ನೂ ಭೇಟಿ ಮಾಡಿದ್ದಾನೆ. ಬೆಳಗಾವಿ ವಿಮಾನ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿದೆ. ಅವುಗಳನ್ನು ಚುರುಕುಗೊಳಿಸುವ ಸಲುವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ತಮ ಸರದಿ 2028ಕ್ಕೆ ಮೆಜೆಸ್ಟಿಕ್‌ನ ಟ್ರಾಫಿಕ್ ಜಾಮ್‌ನಲ್ಲಿ ನಮಗೆ ಅವಕಾಶ ಸಿಕ್ಕರೂ ಸಿಗಬಹುದು ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು.
ರಾಜಣ್ಣ ಕೇಸ್ ಗೂ ರಾಜೇಂದ್ರ ಕೇಸ್ ಗೂ ಸಂಬಂಧ ಇಲ್ಲ
'ಸಚಿವ ಕೆ. ಎನ್. ರಾಜಣ್ಣ ಹನಿಟ್ರ್ಯಾಪ್ ಕೇಸ್ ಬೇರೆ. ರಾಜೇಂದ್ರ ಕೇಸ್ ಬೇರೆ. ಎರಡೂ ಒಂದಕ್ಕೊಂದು ಸಂಬಂಧ ಇಲ್ಲ. ರಾಜೇಂದ್ರ ಕೇಸ್ ಸ್ವಲ್ಪ ಹಳೆಯದು, ಎರಡು ತಿಂಗಳು ಮೊದಲಿನದು. ಅವರಿಗೆ ಯಾರೋ ಕರೆ ಮಾಡಿ ಬೆದರಿಕೆ ಹಾಕ್ತಿದ್ರು ಅನ್ನೋದು. ಹನಿ ಟ್ರ್ಯಾಪ್‌ಗೂ ಇದಕ್ಕೂ ಸಂಬಂಧ ಇಲ್ಲ' ಎಂದರು. ಅಂತೆಯೇ 'ಅಧಿವೇಶನ ಮುಗಿದ ಬಳಿಕ ನಾನು ರಾಜಣ್ಣ ಅವರನ್ನು ಭೇಟಿ ಮಾಡಿಲ್ಲ. ರಾಜಣ್ಣ ಸಿಕ್ಕಿದ ಮೇಲೆ ಯಾಕೆ ತಣ್ಣಗಾದರು ಎಂಬ ಬಗ್ಗೆ ಚರ್ಚೆ ಮಾಡ್ತೇನೆ. ಎಲ್ಲದಕ್ಕೂ ಇತಿಶ್ರೀ ಹಾಡಬೇಕು. ಇಲ್ಲದಿದ್ದರೆ ಹೋದಲ್ಲಿ ಬಂದಲ್ಲಿ ಮತ್ತೆ ಹನಿಟ್ರ್ಯಾಪೇ ಚರ್ಚೆ ಆಗುತ್ತದೆ' ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಬಾಕಿ ಪಾವತಿ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ, 'ಹಂತಹಂತವಾಗಿ ಬಿಲ್ ಕ್ಲಿಯರ್ ಮಾಡ್ತಿದ್ದೇವೆ. ನಮ್ಮ ಇಲಾಖೆಯದ್ದು ಯಾವುದೂ ಪೆಂಡಿಂಗ್ ಇಲ್ಲ. ನಾವು ಎಲ್ಲವನ್ನೂ ಕೊಡ್ತಿದ್ದೇವೆ' ಎಂದರು. ಸಚಿವ ಎಂ.ಬಿ.ಪಾಟೀಲ್ ಇಂದು ತಮನ್ನು ಭೇಟಿ ಮಾಡಿದ್ದು ಔಪಚಾರಿಕವಾಗಿ ಅಷ್ಟೇ. ಅದರಲ್ಲಿ ವಿಶೇಷವೇನಿಲ್ಲ ಎಂದರು. ಗುತ್ತಿಗೆದಾರರ ಬಾಕಿ ಬಿಲ್ ನಮಲ್ಲಿ ಯಾವುದೂ ನೆನೆಗುದಿಗೆ ಬಿದ್ದಿಲ್ಲ. ಕಾಲಕಾಲಕ್ಕೆ ಎಲ್ಲವನ್ನೂ ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.
ಪರಿಶಿಷ್ಟ ಸಮುದಾಯಗಳ ಶಾಸಕರು ಮತ್ತು ಮುಖಂಡರ ಸಭೆಗೆ ಅನುಮತಿ ಪಡೆದುಕೊಳ್ಳುವ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ವೇಣಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ವೇಳೆ ಅವರ ಜೊತೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.