ಸಿದ್ದರಾಮಯ್ಯ ಮತ್ತು ಪ್ರಹ್ಲಾದ್ ಜೋಶಿ 
ರಾಜಕೀಯ

ಕಬ್ಬು ಬೆಳೆಗಾರರ ಹೋರಾಟ ಬೇರೆ ರಾಜ್ಯಗಳಲ್ಲೇಕಿಲ್ಲ?: ರಾಜ್ಯಕ್ಕೆ ಕೇಂದ್ರ ಸರ್ಕಾರ ಪ್ರಶ್ನೆ

ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಕಬ್ಬಿನ ಬೆಲೆಯು ಕರ್ನಾಟಕಕ್ಕಿಂತ ಹೆಚ್ಚಿದೆ ಎಂದ ಅವರು, ಈ ರಾಜ್ಯಗಳೂ ಸಹ ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ (MSP) ಅನ್ವಯಿಸಿವೆ.

ಧಾರವಾಡ: ಕಬ್ಬು ಬೆಳೆಗಾರರ ಹೋರಾಟದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶನಿವಾರ ತೀವ್ರವಾಗಿ ಕಿಡಿಕಾರಿದ್ದು, ಇತರೆ ರಾಜ್ಯಗಳ ರೈತರೇಕೆ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ ನಿಗದಿ ಸೇರಿದಂತೆ ಹಲವು ಕಾರಣಗಳಿಗಾಗಿ ಕಬ್ಬು ಬೆಳೆಗಾರರ ಹೋರಾಟಗಳು ಕರ್ನಾಟಕದಲ್ಲಷ್ಟೇ ನಡೆಯುತ್ತಿವೆ. ಇತರೆ ಸಕ್ಕರೆ ಉತ್ಪಾದನಾ ರಾಜ್ಯಗಳಲ್ಲಿ ಏಕಿಲ್ಲ? ರಾಜ್ಯ ಸರ್ಕಾರ ರೈತರಿಗೆ ಸಿಗಬೇಕಾದ ಲಾಭವನ್ನು ತಲುಪಿಸುವಲ್ಲಿ ವಿಫಲವಾಗಿರುವುದೇ ಇದಕ್ಕೆ ಕಾರಣ ಎಂದು ಕಿಡಿಕಾರಿದರು.

ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಕಬ್ಬಿನ ಬೆಲೆಯು ಕರ್ನಾಟಕಕ್ಕಿಂತ ಹೆಚ್ಚಿದೆ ಎಂದ ಅವರು, ಈ ರಾಜ್ಯಗಳೂ ಸಹ ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ (MSP) ಅನ್ವಯಿಸಿವೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಇನ್ನೂ ಪವರ್‌ಪರ್ಚೇಸ್ ಅಗ್ರಿಮೆಂಟ್ (PPA) ಅನ್ನು ಸಕ್ಕರೆ ಕಾರ್ಖಾನೆಗಳೊಂದಿಗೆ ಅಂತಿಮಗೊಳಿಸಿಲ್ಲ. ಇದರಿಂದಾಗಿ ಕಾರ್ಖಾನೆ ಮಾಲೀಕರು ಬೆಲೆಯನ್ನು ಹೆಚ್ಚಿಸಲು ಮುಂದೆ ಬಂದಿಲ್ಲ. ಕಾರ್ಖಾನೆಗಳು ವಿದ್ಯುತ್ ಉತ್ಪಾದಿಸುತ್ತಿದ್ದರೂ, ಸರ್ಕಾರ ಖರೀದಿಸಲು ಸಿದ್ಧವಿಲ್ಲ.

ಸರ್ಕಾರದ ಹಣಕಾಸಿನ ದುರ್ವವಸ್ಥೆಯಿಂದ ರೈತರ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿದೆ. ಸರ್ಕಾರ ತನ್ನ ಖಾಲಿಯಾದ ಖಜಾನೆ ತುಂಬಿಕೊಳ್ಳಲು ತನ್ನ ಭರವಸೆ ಯೋಜನೆಗಳ ಹೊರೆಗಾಗಿ ರಸ್ತೆ ತೆರಿಗೆ ಹೆಚ್ಚಿಸಿದೆ ಮತ್ತು ಪ್ರತಿ ಲೀಟರ್‌ ಡೀಸೆಲ್ ಮೇಲೆ ರೂ.3 ಹೆಚ್ಚುವರಿ ಸೆಸ್ ವಿಧಿಸಿದೆ. ಇದರಿಂದ ಕಟಾವು ಮತ್ತು ಸಾರಿಗೆ ವೆಚ್ಚಗಳು ಹೆಚ್ಚಿವೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಡೀಸೆಲ್ ಸೆಸ್ ನಿಂದ ಸುಮಾರು ರೂ.7,500 ಕೋಟಿ ಸಂಗ್ರಹಿಸಿದೆ. ಆದರೆ, ರೈತರಿಗೆ ಅದರ ಲಾಭ ನೀಡಿಲ್ಲ. ಹಿಂದಿನ ವರ್ಷ ಸಾರಿಗೆ ವೆಚ್ಚ ಪ್ರತಿ ಟನ್ನಿಗೆ ರೂ.550 ಇದ್ದು, ಈ ವರ್ಷ ಅದು ರೂ.790ಕ್ಕೆ ಏರಿದೆ. ಈ ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರವೇ ಪೂರ್ಣ ಹೊಣೆಗಾರ ಎಂದರು.

ಇದೇ ವೇಳೆ ಕಬ್ಬಿನ ಬಾಕಿ ಪಾವತಿ ವಿಚಾರವಾಗಿ ಮಾತನಾಡಿದ ಅವರು, ಎನ್‌ಡಿಎ ಸರ್ಕಾರ 2017ರಲ್ಲಿ ಬಾಕಿ ತೆರವು ನೀತಿ ಜಾರಿಗೆ ತಂದ ಬಳಿಕ ದೇಶಾದ್ಯಂತ ಪಾವತಿಗಳ ಪ್ರಮಾಣ ಶೇ. 97ರಷ್ಟು ತಲುಪಿದ್ದು, ಕಳೆದ ವರ್ಷ ಶೇ.99.99ಕ್ಕೆ ತಲುಪಿದೆ. ಆದರೆ, ಯುಪಿಎ ಸರ್ಕಾರ 2014ರಲ್ಲಿ ರೂ.35,000 ಕೋಟಿ ಬಾಕಿ ಉಳಿಸಿತ್ತು ಎಂದು ಹೇಳಿದರು. ಕಬ್ಬು ಬೆಳೆಗಾರರಿಗೆ ನೆರವಾಗಲು ಮೋದಿ ಸರ್ಕಾರ ರೂ. 16,500 ಕೋಟಿ ಪ್ರೋತ್ಸಾಹ ಪ್ಯಾಕೇಜ್ ನೀಡಿತ್ತು ಎಂದು ಜೋಶಿ ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಎಲ್ಲ ವಿಷಯಗಳಿಗೂ ಕೇಂದ್ರವನ್ನು ದೂರುವುದು ಅಭ್ಯಾಸವಾಗಿ ಹೋಗಿದೆ. ಇದು ರಾಹುಲ್ ಗಾಂಧಿ ಸೇರಿ ದೆಹಲಿಯಲ್ಲಿರುವ ತಮ್ಮ ನಾಯಕರನ್ನು ತೃಪ್ತಿ ಪಡಿಸಲು ಮಾತ್ರ. ಒಂಭತ್ತು ದಿನಗಳ ಕಾಲ ಸುಮ್ಮನೆ ಕೂತು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ದರ ನಿಗದಿ ಮಾಡಿದ್ದು, ಅದನ್ನು ಬರೀ ಮಾತಿನಲ್ಲಿ ಮಾತ್ರವಲ್ಲ, ಕಾರ್ಯದಲ್ಲಿಯೂ ತೋರಿಸಿ ಕಬ್ಬು ಬೆಳೆಗಾರರ ನಿಜವಾದ ಬೇಡಿಕೆಗಳನ್ನು ಶೀಘ್ರದಲ್ಲೇ ಪೂರೈಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುದ್ಧ ಭುಗಿಲೆದ್ದರೆ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ': ಆಫ್ಘಾನಿಸ್ತಾನ, ಪಾಕಿಸ್ತಾನ ಜೊತೆ ಶಾಂತಿ ಮಾತುಕತೆ ಮತ್ತೆ ವಿಫಲ

'vote chori': ರಾಜ್ಯದ 1.12 ಕೋಟಿ ಜನರಿಂದ 'ಕೈ' ಸಹಿ ಸಂಗ್ರಹ, ನ.10ಕ್ಕೆ ಹೈಕಮಾಂಡ್'ಗೆ ಸಲ್ಲಿಕೆ

ಮೂಲಸೌಕರ್ಯ ಸಮಸ್ಯೆ ಸರಿಪಡಿಸಲಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ: ಡಿಕೆ.ಶಿವಕುಮಾರ್'ಗೆ ಆರ್.ಅಶೋಕ್

ಗದಗ-ಬೆಟಗೇರಿ: ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಉಸಿರಾಡಿ ಅಚ್ಚರಿ ಮೂಡಿಸಿದ ವ್ಯಕ್ತಿ !

ಭದ್ರಾ ಕಾಲುವೆಗೆ ಬಿದ್ದ ಕಾರು: ಇಬ್ಬರು ಜಲಸಮಾಧಿ, ನಾಲ್ವರು ಪಾರು

SCROLL FOR NEXT