ಬೆಂಗಳೂರು: ವೋಟಿಗಾಗಿ ಮತಾಂಧರರ ಮೇಲೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ತೋರುವುದು ದೇಶಕ್ಕೆ ಒಳ್ಳೆಯದಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿರುವ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವ ವೀಡಿಯೋ ಹೇಗೆ ಸೋರಿಕೆಯಾಯಿತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆಯೇ ವಿನಃ ಅವರಿಗೆ ಫೋನ್ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿಲ್ಲ ಎಂದು ಟೀಕಿಸಿದ್ದಾರೆ.
ಈ ಘಟನೆಯ ನಂತರವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಭಯೋತ್ಪಾದಕ ಶಂಕಿತ ಯಾರೊಂದಿಗೆ ಮಾತನಾಡುತ್ತಿದ್ದಾನೆ ಎಂಬುದನ್ನು ತನಿಖೆ ಮಾಡುವ ಬದಲು, ವೀಡಿಯೊ ಸೋರಿಕೆ ಮಾಡಿದವರನ್ನು ಪರಿಶೀಲಿಸಲು ಗೃಹ ಸಚಿವ ಪರಮೇಶ್ವರ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಕೆಲವು ಮುಸ್ಲಿಂ ಮತಗಳಿಗಾಗಿ, ರಾಜ್ಯ ಸರ್ಕಾರವು ರಾಷ್ಟ್ರದ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿದ ಅವರು, ಪ್ರಧಾನಿ ಮೋದಿಯವರು ಸರಣಿ ಸಭೆಗಳನ್ನು ನಡೆಸಿದ್ದಾರೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಾಗಿದ್ದಾಗ ದಲಿತರನ್ನು ಸುಟ್ಟು ಹಾಕಲಾಯಿತು. ಅಮಿತ್ ಶಾ ಬಗ್ಗೆ ಮಾತನಾಡುವುದಕ್ಕೂ ಮೊದಲು ಖರ್ಗೆ ತಮ್ಮ ವೈಫಲ್ಯವನ್ನು ನೋಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.