ಬೆಂಗಳೂರು: ಸಚಿವ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ಧತೆ ನಡೆಸುತ್ತಿದ್ದು, ಈ ನಡುವಲ್ಲೇ ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಮತ್ತು ಅವರ ಕಿರಿಯ ಸಹೋದರ ಡಿಕೆ ಸುರೇಶ್ ಅವರು ಹೈಕಮಾಂಡ್ ನಾಯಕರನ್ನು ಭಾನುವಾರ ಭೇಟಿ ಮಾಡಿದ್ದಾರೆ.
ನವದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಕೆ. ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರು ಭೇಟಿ ಮಾಡಿದ್ದು, ಈ ವೇಳೆ ನಾಯಕರ ನಡುವೆ ನಡೆದಿರುವ ಮಾತುಕತೆ ಕುರಿತು ಕುತೂಹಲಗಳು ಮೂಡತೊಡಗಿವೆ.
ಸೋಮವಾರ ದೆಹಲಿಯಲ್ಲಿ ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸಿದ್ದರಾಮಯ್ಯ ಅವರು ಮಾತುಕತೆ ನಡೆಸುವ ನಿರೀಕ್ಷೆಯಿದ್ದು, ಇದಕ್ಕೂ ಮುನ್ನ ಡಿಕೆ ಸಹೋದರರು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಲು ಸಿದ್ದರಾಮಯ್ಯ ಅವರ ಪಾಳಯ ಪ್ರಯತ್ನ ನಡೆಸುತ್ತಿದೆ ಎಂಬ ಊಹಾಪೋಹಗಳೂ ಶುರುವಾಗಿದೆ.
ಏತನ್ಮಧ್ಯೆ ಹೈಕಮಾಂಡ್ ನಾಯಕರ ಭೇಟಿಯಾದ ಬಳಿಕ ಮಾತನಾಡಿರುವ ಡಿಕೆ.ಶಿವಕುಮಾರ್ ಅವರು, ನಾನು ಹಗಲಿರುಳು ಪಕ್ಷವನ್ನು ಕಟ್ಟಿದ್ದೇನೆ. ಕಾಂಗ್ರೆಸ್ ಅನ್ನು ಬ್ಲ್ಯಾಕ್ ಮೇಲ್ ಮಾಡುವವನಲ್ಲ. ಪಕ್ಷವನ್ನು ನಿರ್ಮಿಸಲು ನಾನು ಹಗಲಿರುಳು ಶ್ರಮಿಸಿದ್ದೇನೆ. ಮತ್ತೆ ಕೂಡ ಪಕ್ಷವನ್ನು ಅಧಿಕಾರಕ್ಕೆ ತರಲು ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆಂದು ಹೇಳಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳಿಗೆ ಉತ್ತರಿಸಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ನೀಡಬೇಕು? ನನ್ನ ಮಾನಸಿಕ, ದೈಹಿಕ ಮತ್ತು ರಾಜಕೀಯ ಆರೋಗ್ಯ ಚೆನ್ನಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ 100 ಕಾಂಗ್ರೆಸ್ ಭವನಗಳ ಶಂಕುಸ್ಥಾಪನಾ ಸಮಾರಂಭಕ್ಕಾಗಿ ಖರ್ಗೆ ಮತ್ತು ರಾಹುಲ್ ಅವರ ದಿನಾಂಕಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆಂದು ಹೇಳಿದರು.
ನಾನು ಗಾಂಧಿ ಭಾರತ್ ಎಂಬ ಪುಸ್ತಕವನ್ನು ಬರೆದಿದ್ದೇನೆ. ಅದರ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಬೇಕು. ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಆಚರಿಸಬೇಕು. ಇದನ್ನೆಲ್ಲಾ ಯಾರು ಮಾಡಬೇಕು? ನಾನೇ ಮಾಡಬೇಕು. ನಾನೇಕೆ ರಾಜೀನಾಮೆ ನೀಡಬೇಕು? ಈಗ ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ. ಕಾಂಗ್ರೆಸ್ ನನಗೆ ಸೂಚನೆ ನೀಡುವವರೆಗೆ ಈ ಸ್ಥಾನದಲ್ಲಿ ಶಿಸ್ತಿನ ಸೈನಿಕನಂತೆ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ.
ಖರ್ಗೆ ಅವರೊಂದಿಗೆ ಸಚಿವ ಸಂಪುಟ ಪುನರ್ರಚನೆ ಕುರಿತು ಚರ್ಚಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, "ಇದು ಮುಖ್ಯಮಂತ್ರಿಯವರ ವಿಷಯ. ಅವರು ಹೈಕಮಾಂಡ್ ಜೊತೆ ಚರ್ಚಿಸುತ್ತಾರೆ. ನನ್ನನ್ನು ಕರೆದರೆ ನಾನು ಹೋಗುತ್ತೇನೆ. ಪಕ್ಷದ ಕಚೇರಿಗಳ ಶಂಕುಸ್ಥಾಪನೆಗೆ ಮಾತ್ರ ನಾನು ದಿನಾಂಕ ನಿಗದಿಪಡಿಸಲಿದ್ದೇನೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಒಟ್ಟಿಗೆ ಶಂಕುಸ್ಥಾಪನೆ ಮಾಡಬೇಕು ಎಂಬುದು ನನ್ನ ಆಶಯ. ಡಿಸೆಂಬರ್ 1 ರಿಂದ ಸಂಸತ್ತಿನ ಅಧಿವೇಶನ ಆರಂಭವಾಗಲಿದ್ದು, ಯಾವುದೇ ವಾರಾಂತ್ಯದಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ನಾನು ವಿನಂತಿಸುತ್ತೇನೆಂದು ಹೇಳಿದರು.
ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಕಟ್ಟಡ ಯೋಜನೆಯ ಅನುಮೋದನೆಗಾಗಿ ನಾನು 2.30 ಕೋಟಿ ರೂ. ನೀಡಿದ್ದೇನೆ. ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕಚೇರಿ ನಿರ್ಮಿಸಲಾಗುತ್ತಿದೆ. 75-80 ಕಚೇರಿಗಳ ನಿರ್ಮಾಣಕ್ಕೆ ಭೂಮಿಯೂ ಸಿದ್ಧವಾಗಿದೆ. ನೂರು ಕಚೇರಿಗಳ ನಿರ್ಮಾಣವನ್ನು ನಾವು ಮಾಡುತ್ತೇವೆಂದು ಹೇಳಿದರು.