ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ಪಡೆದಿದ್ದಾರೆ,.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿದ ನಂತರ ಅಂತಿಮ ಮುದ್ರೆ ಹಾಕುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ನವದೆಹಲಿಯಲ್ಲಿ ರಾಹುಲ್ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಸೋಮವಾರ ಮತ್ತೆ ದೆಹಲಿಗೆ ತೆರಳಲಿದ್ದಾರೆ. ಇದೇ ವೇಳೆ ಸಂಪುಟ ಪುನರಾಚನೆ ಕುರಿತು ಚರ್ಚಿಸಲು ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದಾರೆ.
ನಾಲ್ಕು ದಿನಗಳ ನಂತರ, ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅವರು ರಾಹುಲ್ ಗಾಂಧಿಯನ್ನು ಮತ್ತೆ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.
ಸಂಪುಟದಿಂದ ಕೈಬಿಡಲಾಗುವ ಸಚಿವರು ಮತ್ತು ಹೊಸದಾಗಿ ಸೇರಿಸಿಕೊಳ್ಳುವ ಶಾಸಕರ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಅವರ 'ವೋಟ್ ಚೋರಿ' ಹೇಳಿಕೆಗಳ ಕುರಿತು ಪರೋಕ್ಷವಾಗಿ ಟೀಕಿಸಿದ್ದಕ್ಕಾಗಿ ಸಂಪುಟದಿಂದ ವಜಾಗೊಳಿಸಲಾದ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಅವರ ಎಂಎಲ್‌ಸಿ ಮಗ ರಾಜೇಂದ್ರ, ದೆಹಲಿಯಲ್ಲಿ ಹಲವಾರು ಬಾರಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ. ಪಕ್ಷದ ಹೈಕಮಾಂಡ್ ಸ್ವಲ್ಪ ಸಮಯದ ಹಿಂದೆಯೇ ಸಂಪುಟ ಪುನಾರಚನೆ ಮಾಡುವ ವಿಷಯವನ್ನು ಸಿಎಂ ಅವರ ವಿವೇಚನೆಗೆ ಬಿಟ್ಟಿತ್ತು, ಆದರೆ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳಿಗಾಗಿ ಪಕ್ಷ ಕಾಯುತ್ತಿತ್ತು. ಸಿದ್ದರಾಮಯ್ಯ ಕೂಡ ಹೈಕಮಾಂಡ್ ತಮಗೆ ಹಸಿರು ನಿಶಾನೆ ನೀಡಿದೆ ಎಂದು ಹೇಳಿದ್ದರು.
2028 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಹೊಸ ಆರಂಭದೊಂದಿಗೆ ಒಗ್ಗೂಡಿಸಲು ಪುನಾರಚನೆ ಅವಕಾಶ ನೀಡುತ್ತದೆ ಎಂದು ರಾಜಕೀಯ ಪಂಡಿತರು ಹೇಳಿದ್ದಾರೆ. ಸಿದ್ದರಾಮಯ್ಯ ಸಂಪುಟ ಪುನರ್ರಚನೆಗೆ ಉತ್ಸುಕತೆ ತೋರುತ್ತಿದ್ದಂತೆ ಅದನ್ನು ತಿಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪುನಾರಚನೆ ನಿಲ್ಲಿಸುವ ಯೋಜನೆಯನ್ನು ರೂಪಿಸಲು ಭಾನುವಾರ ದೆಹಲಿಯಲ್ಲಿಯೇ ಉಳಿದಿದ್ದರು ಎನ್ನಲಾಗಿದೆ. ಡಿಕೆಶಿವಕುಮಾರ್ ತಂತ್ರ ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.