ಬೆಂಗಳೂರು: ನವೆಂಬರ್‌ನಲ್ಲಿ ಅಧಿಕಾರ ಹಸ್ತಾಂತರ ಇಲ್ಲವೆಂದಾಗಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಕುಳಿತುಕೊಳ್ಳುವ ಪರಿಸ್ಥಿತಿ ಏಕೆ ಬರುತ್ತಿತ್ತು? ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೃಷ್ಣ ಮೃಗಗಳು ಸತ್ತಿವೆ, ಕಬ್ಬು ಬೆಳೆಗಾರರ ಸಮಸ್ಯೆ ಇದೆ. ಇದೆಲ್ಲವನ್ನು ಬಿಟ್ಟು ದಿಲ್ಲಿಯಲ್ಲಿ ಕುಳಿತುಕೊಳ್ಳುವಂಥ ಘನಂದಾರಿ ಕೆಲಸ ಏನಿದೆ? ಸಿಎಂ ಕುರ್ಚಿಗೆ ಮ್ಯೂಸಿಕಲ್ ಚೇರ್ ಆಟ ನಡೆಯುತ್ತಿದೆ. ಹೀಗಾಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲರೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಲವರು ಮಂತ್ರಿಗಳಾಗಲು ಹೊಸ ಬಟ್ಟೆ ಹೊಲಿಸಿಕೊಂಡಿದ್ದಾರೆ, ದೆಹಲಿಯಲ್ಲಿ ಒಬ್ಬರು ಸ್ಥಾನ ಉಳಿಸಿಕೊಳ್ಳಲು ಹೆಣಗುತ್ತಿದ್ದರೆ, ಇನ್ನೊಬ್ಬರು ಸ್ಥಾನ ಪಡೆಯಲು ಹೋಗಿದ್ದಾರೆ. ಇದರಿಂದಾಗಿ ಎರಡೂವರೆ ವರ್ಷದ ಒಪ್ಪಂದ ಆಗಿರುವುದು ಸತ್ಯ ಎಂದು ಅರ್ಥವಾಗುತ್ತದೆ ಎಂದು ಹೇಳಿದರು.
ಒಂದೊಮ್ಮೆ ಸಚಿವ ಸಂಪುಟ ಪುನಾರಚನೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ ಬೀಳಲಿದೆ. ಅವರು (ಡಿ.ಕೆ.ಶಿವಕುಮಾರ್) ಇಷ್ಟು ದಿನ ಟೆಂಪಲ್ ರನ್ ಮಾಡಿದ್ದೆಲ್ಲ ವ್ಯರ್ಥವಾಗುತ್ತದೆ.
ಹಾಸನಾಂಬೆ ಎರಡು ಸಲ ವರ ಕೊಟ್ಟಿದ್ದೂ ಹೋಗುತ್ತದೆ. ಭಂಡಾರ ಬಾಕ್ಸ್ ತೆರೆದುಕೊಂಡು ಕೂರಬೇಕಾಗುತ್ತದೆ. ಸಂಪುಟ ಪುನಾರಚನೆ ಆಗದಿದ್ದರೆ ಮಾತ್ರ ಶಿವಕುಮಾರ್‌ಗೆ ಅವಕಾಶ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಅವರನ್ನು ಭೇಟಿ ಆಗುತ್ತಿರುವುದೊಂದು ರಾಜಕೀಯ ಆಟ. ಈ ಹಿಂದೆ ಜಿಎಸ್‌ಟಿ ಸಭೆಗೆ ಹೋಗಿರಲಿಲ್ಲ. ಆಗ ಹೋಗದವರು ಈಗ ಯಾಕೆ ಹೋಗುತ್ತಿದ್ದಾರೆ? ಅಭಿವೃದ್ಧಿಗಾಗಿ ಮೋದಿಯವರ ಭೇಟಿ ಎನ್ನುವುದೊಂದು ನಾಟಕ ಎಂದು ಲೇವಡಿ ಮಾಡಿದ್ದಾರೆ.